Thursday, November 21, 2024

ಬಾಕ್ಸ್ ಆಫೀಸ್ ದಂಗಲ್​ಗೆ ಕಾಂತಾರ- ತೋತಾಪುರಿ ಅಖಾಡ

ಕನ್ನಡದ ಎರಡು ಬಹುನಿರೀಕ್ಷಿತ ಸಿನಿಮಾಗಳು ಬಾಕ್ಸ್ ಆಫೀಸ್ ದಂಗಲ್​ಗೆ ಮುನ್ನುಡಿ ಬರೀತಿವೆ. ದಸರಾ ಹಬ್ಬದ ಸಂಭ್ರಮವನ್ನು ಡಬಲ್ ಮಾಡಲು ಬರ್ತಿರೋ ಈ ಸಿನಿಮಾಗಳಿಗೆ ಥಿಯೇಟರ್ ಕ್ಲ್ಯಾಶ್ ಆಗೋದ್ರ ಜೊತೆ ಪ್ರೇಕ್ಷಕರಿಗೆ ಯಾವ ಸಿನಿಮಾ ಮೊದಲು ನೋಡ್ಬೇಕು ಅನ್ನೋ ಕನ್ಫ್ಯೂಷನ್ ಶುರುವಾಗಲಿದೆ. ಇಷ್ಟಕ್ಕೂ ಆ ಎಕ್ಸ್​ಪೆಕ್ಟೆಡ್ ಚಿತ್ರಗಳ್ಯಾವುವು..? ಅವುಗಳ ಕಥೆ ಏನು ಅನ್ನೋದಕ್ಕೆ ಉತ್ತರ ಇಲ್ಲಿದೆ. ನೀವೇ ಓದಿ.

  • ಥಿಯೇಟರ್ ಕ್ಲ್ಯಾಶ್ ಜೊತೆ ಪ್ರೇಕ್ಷಕರಿಗೆ ಟೀಮ್ಸ್​ನಿಂದ ಕನ್ಫ್ಯೂಷನ್
  • ನವರಸನಾಯಕ ಜಗ್ಗೇಶ್ ವರ್ಸಸ್ ಮಲ್ಟಿ ಟ್ಯಾಲೆಂಟ್ ರಿಷಬ್..!
  • ಒಂದ್ಕಡೆ ಭಾವೈಕ್ಯತೆ ಸಂದೇಶ.. ಮತ್ತೊಂದ್ಕಡೆ ಕರಾವಳಿ ಸಂದೇಶ

ಕೊರೋನಾ ಮುಗಿದಮೇಲೆ ಥಿಯೇಟರ್​ಗೆ ಬರೋಕೆ ನಾ ಮುಂದು ತಾ ಮುಂದು ಅಂತ ಸಾಲು ಸಾಲು ಸಿನಿಮಾಗಳು ಕ್ಯೂ ನಿಂತವು. ಅದ್ರಲ್ಲೂ ಕಾಯೋಕೆ ತಾಳ್ಮೆ ಇಲ್ಲದೆ ವಾರಕ್ಕೆ ನಾಲ್ಕೈದು ಸಿನಿಮಾಗಳಂತೆ ಟ್ರಾಫಿಕ್ ಜಾಮ್ ಆಗಿದ್ದೂ ಉಂಟು. ಆದ್ರೆ ಅವುಗಳ ಪೈಕಿ ಎಷ್ಟು ಚಿತ್ರಗಳು ಪ್ರೇಕ್ಷಕರ ಮನಗೆದ್ದವು ಅನ್ನೋದು ಮುಖ್ಯವಾಗುತ್ತೆ. ಸದ್ಯ ಎರಡು ಭರವಸೆಯ ಚಿತ್ರಗಳು ಒಟ್ಟಿಗೆ ಬರಲು ಸಜ್ಜಾಗಿವೆ.

ಯೆಸ್.. ಭಾರೀ ನಿರೀಕ್ಷೆ ಮೂಡಿಸಿರೋ ಚಿತ್ರಗಳು ಒಟ್ಟಿಗೆ ಬಂದ್ರೆ ಬಹುದೊಡ್ಡ ಹೊಡೆತ ಬೀಳಲಿದೆ. ಸದ್ಯ ನವರಸನಾಯಕ ಜಗ್ಗೇಶ್​ರ ತೋತಾಪುರಿ ಮೊದಲ ಭಾಗ ಹಾಗೂ ರಿಷಬ್ ಶೆಟ್ರ ಕಾಂತಾರ ಚಿತ್ರಗಳು ಒಟ್ಟೊಟ್ಟಿಗೆ ಇದೇ ಸೆಪ್ಟೆಂಬರ್ 30ಕ್ಕೆ ದೊಡ್ಡ ಪರದೆ ಆವರಿಸಿಕೊಳ್ತಿವೆ. ಎರಡೂ ಬೇರೆ ಬೇರೆ ಜಾನರ್ ಸಿನಿಮಾಗಳಾಗಿದ್ದು, ಯುನಿಕ್ ಕಾರಣಗಳಿಂದ ನೋಡುಗರ ನಾಡಿಮಿಡಿತ ಹೆಚ್ಚಿಸಿವೆ.

ನೀರ್​ದೋಸೆ ಕಾಂಬೋ ಜಗ್ಗೇಶ್- ವಿಜಯ್ ಪ್ರಸಾದ್​ರ ತೋತಾಪುರಿ ಕನ್ನಡದ ಜೊತೆ ಐದು ಇಂಡಿಯನ್ ಭಾಷೆಯಲ್ಲಿ ಏಕಕಾಲದಲ್ಲಿ ರಿಲೀಸ್ ಆಗ್ತಿದೆ. ಇದು ಜಗ್ಗೇಶ್​ರ ಮೊದಲ ಪ್ಯಾನ್ ಇಂಡಿಯಾ ಚಿತ್ರವಾಗಲಿದ್ದು, ಕೆಜಿಎಫ್​ನಂತೆ ಎರಡೆರಡು ಭಾಗಗಳಲ್ಲಿ ಬರ್ತಿರೋದು ಇಂಟರೆಸ್ಟಿಂಗ್. ವಿಜಯ್ ಪ್ರಸಾದ್ ಚೇಷ್ಠೆಗೆ ಒಂದಷ್ಟು ಎಮೋಷನ್ಸ್​ನ ಹಾಕಿ ಮಸಾಲೆ ಹಾಕಿದ್ದಾರೆ. ಇದು ಪ್ರಸ್ತುತ ಸಾಮಾಜಿಕ ಬೆಳವಣಿಗೆಗಳ ಮೇಲೆ ಬೆಳಕು ಚೆಲ್ಲಲಿದ್ದು, ಕೋಮು ಗಲಭೆಗಳ ಕಡಿತಕ್ಕೆ ಗಟ್ಟಿ ಸಂದೇಶವಂತೂ ನೀಡಲಿದೆ.

ಜಗ್ಗೇಶ್ ಜೊತೆ ಡಾಲಿ, ಅದಿತಿ ಪ್ರಭುದೇವ, ದತ್ತಣ್ಣ, ಸುಮನ್ ರಂಗನಾಥ್​ರಂತಹ ದೊಡ್ಡ ದೊಡ್ಡ ಕಲಾವಿದರು ತೋತಾಪುರಿಯ ಟೇಸ್ಟ್ ಹೆಚ್ಚಿಸಲಿದ್ದು, ಈಗಾಗ್ಲೇ ಟ್ರೈಲರ್ ಹಾಗೂ ಸಾಂಗ್ಸ್ ಮಸ್ತ್ ಕಿಕ್ ಕೊಟ್ಟಿವೆ. ಶ್ರಾವಣಿ ಸುಬ್ರಮಣ್ಯ, ಶಿವಲಿಂಗದಂತಹ ಹಿಟ್ ಸಿನಿಮಾಗಳ ನಿರ್ಮಾಪಕ ಕೆಎ ಸುರೇಶ್ ಈ ಚಿತ್ರವನ್ನು ನಿರ್ಮಿಸಿದ್ದು, ಭಾವೈಕ್ಯತೆಯ ಸಂದೇಶ ಸಾರಲಿದೆ ತೋತಾಪುರಿ.

ಇನ್ನು ಕಾಂತಾರ ಕೂಡ ಕರಾವಳಿ ನೆಲದ ಸೊಗಡಿನ ಹಾಗೂ ಸೊಬಗಿನ ಸಿನಿಮಾ. ಅಲ್ಲಿನ ಆಚಾರ, ವಿಚಾರ, ನಡೆ- ನುಡಿ, ಬದುಕು- ಬವಣೆಗಳನ್ನ ಎತ್ತಿ ಹಿಡಿಯೋ ಚಿತ್ರವಾಗಲಿದೆ. ಅದ್ರಲ್ಲೂ ಸಂಪ್ರದಾಯ ಮತ್ತು ಅದಕ್ಕೆ ಅಡ್ಡಿಯಾಗೋ ಪೊಲೀಸ್ ಇಲಾಖೆಯ ಸಂಘರ್ಷದ ಕಥಾನಕ ಹೊತ್ತು ಬರ್ತಿದೆ. ಟ್ರೈಲರ್ ಜೊತೆ ಸಾಂಗ್ಸ್ ಕೂಡ ಭರವಸೆ ಮೂಡಿಸಿದ್ದು, ರಿಷಬ್ ಶೆಟ್ಟಿ ಸಿನಿಮೋತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ ಕಾಂತಾರ.

ಅದ್ರಲ್ಲೂ ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರ್ ಅವ್ರೇ ಹೊಂಬಾಳೆ ಫಿಲಂಸ್ ಬ್ಯಾನರ್​ನಡಿ ಈ ಸಿನಿಮಾನ ನಿರ್ಮಿಸಿದ್ದಾರೆ. ಕಂಬಳ ಈ ಚಿತ್ರದ ಒನ್ ಆಫ್ ದಿ ಹೈಲೈಟ್ ಆಗಿದ್ದು, ನಾಡಹಬ್ಬ ದಸರಾಗೆ ಕಾಂತಾರದ ಕಿಚ್ಚು ಬೆಳ್ಳಿಪರದೆ ಮೇಲೆ ಮೂಡಲಿದೆ. ಸೆಪ್ಟೆಂಬರ್ 30ರಂದೇ ತೋತಾಪುರಿ ಎದುರು ಕಾಂತಾರ ಬರ್ತಿರೋದು ಥಿಯೇಟರ್ ಕ್ಲ್ಯಾಶ್ ಜೊತೆಗೆ ಪ್ರೇಕ್ಷಕರಿಗೆ ಮೊದಲು ಯಾವ ಸಿನಿಮಾನ ವೀಕ್ಷಿಸಬೇಕು ಅನ್ನೋ ಗೊಂದಲ ಸೃಷ್ಟಿಸಲಿದೆ.

ಬಾಕ್ಸ್ ಆಫೀಸ್​ಗೂ ಇದು ಹೊಡೆತ ಬೀಳಲಿದ್ದು, ಬಹುಶಃ ವಿಜಯ್ ಕಿರಗಂದೂರು ಹಾಗೂ ಕೆಎ ಸುರೇಶ್ ಅವ್ರು ಪರಸ್ಪರ ಮಾತುಕತೆ ಮಾಡಿಕೊಂಡು ಬೇರೆ ಬೇರೆ ಡೇಟ್ಸ್​ಗೆ ರಿಲೀಸ್ ಮಾಡಿದ್ರೆ ಆಗೋ ಅನಾಹುತ ತಪ್ಪಿಸಬಹುದು. ಇಲ್ಲವಾದಲ್ಲಿ, ಎರಡೂ ಬೇರೆ ಬೇರೆ ಜಾನರ್ ಚಿತ್ರಗಳಾದ್ದರಿಂದ ಒಟ್ಟಿಗೆ ಬಂದ್ರೂ ಸಹ ಸದಭಿರುಚಿಯ ಚಿತ್ರಗಳನ್ನ ಕನ್ನಡಿಗರು ಎಂದೂ ಕೈಬಿಟ್ಟಿಲ್ಲ. ಒಟ್ಟಾರೆ ಮುಂದೆ ಏನಾಗಲಿದೆ ಅನ್ನೋದನ್ನ ಕಾದುನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES