ಬೆಂಗಳೂರು : ಒಂದು ಕಡೆ ಇಡಿ ಸುಲಿಯಲ್ಲಿ ಸಿಲುಕಿ ಒದ್ಡಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ಒಂದಲ್ಲಾ ಒಂದು ಸಂಕಷ್ಟ ಎದುರಾಗಿದೆ. ಅತ್ತ ಬಂಡೆಗೆ ಇಡಿ ಡ್ರಿಲ್ ಮಾಡುತ್ತಿದ್ರೆ ,ಇತ್ತ ರಾಜ್ಯ ಕಾಂಗ್ರೆಸ್ ನಲ್ಲಿ ದಿನೇ ದಿನೇ ಸಿದ್ದರಾಮಯ್ಯ ಹಾಗು ಡಿ ಕೆ ಶಿವಕುಮಾರ್ ನಡುವಿನ ಆಂತರಿಕ ಕಚ್ಚಾಟ ದೊಡ್ಡದಾಗ್ತಿದೆ. ಸಿದ್ದರಾಮೋತ್ಸವ ಕಾರ್ಯಕ್ರಮಗಿಂತ ,ಫ್ರೀಡಂ ಮಾರ್ಚ್ ತುಂಬಾ ಅಚ್ಚುಕಟ್ಟಾಗಿ ಟ್ರಾಫಿಕ್ ಮ್ಯಾನೇಜ್ಮೆಂಟ್ ಮಾಡಿದ್ದೇ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಬಣದ ವಿರುದ್ಧ ಡಿ.ಕೆ.ಶಿವಕುಮಾರ್ ಗುಡುಗಿದ್ರು.ಇಷ್ಟೆ ಅಲ್ದೇ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಯಾರಿಗೆ ನೀಡಬೇಕು ಅನ್ನೋದು ನನಗೆ,ಸೋನಿಯಾಗಾಂಧಿ, ರಾಹುಲ್ ಗಾಂಧಿ ಗೆ ಮಾತ್ರ ಗೊತ್ತಿರುತ್ತದೆ.ಸಿ ಎಲ್ ಪಿ ನಾಯಕರಿಗೆ ಕೂಡ ಗೊತ್ತಿರಲ್ಲ.ಗೌಪ್ಯವಾಗಿರುತ್ತೆ ಎಂದು ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದರು.ಈ ಹೇಳಿಕೆ ವಿರುದ್ಧ ಸಿದ್ದರಾಮಯ್ಯ ಹಾಗು ಸಿದ್ದು ಆಪ್ತರು ಕೊತ ಕೊತ ಎಂದು ಕುದಿಯಲು ಶುರು ಮಾಡಿದ್ದಾರೆ.
ಕಾಂಗ್ರೆಸ್ ಟ್ರಬಲ್ ಶೂಟರ್ ನೀಡಿದ ಟಿಕೆಟ್ ಹೇಳಿಕೆಗೆ ಬಹುತೇಕ ಎಲ್ಲಾ ನಾಯಕರು ತಿರುಗೇಟು ಕೊಡುತ್ತಿದ್ದಾರೆ.ಡಿ ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಕಾಂಗ್ರೆಸ್ ಪಕ್ಷದಲ್ಲಿ ಯಾರೋ ಒಬ್ಬರು ಟಿಕೆಟ್ ನೀಡಲ್ಲ.ರಾಜ್ಯ ಚುನಾವಣಾ ಸಮಿತಿಯಲ್ಲಿ ಮೊದಲು ಚರ್ಚೆಯಾಗಿ ಬಳಿಕ ಕೇಂದ್ರ ಸ್ಕ್ರೀನಿಂಗ್ ಕಮಿಟಿಗೆ ಶಿಫಾರಸು ಆಗುತ್ತೆ.ನಾನು ಸುದೀರ್ಘವಾಗಿ ಪಿಸಿಸಿ ಅಧ್ಯಕ್ಷನಾಗಿದ್ದೆ. ಇದನ್ನೇ ಪ್ರತ್ಯಕ್ಷವಾಗಿ ನಾನು ನೋಡಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿಕೆಗೆ ಜಿ.ಪರಮೇಶ್ವರ್ ಟಕ್ಕರ್ ಕೊಟ್ಟಿದ್ದಾರೆ.ಅಲ್ದೇ ಬಂಡೆ ಟಿಕೆಟ್ ಹೇಳಿಕೆಗೆ ಸಿದ್ದರಾಮಯ್ಯ ಸೇರಿದ್ದಂತೆ ಸಿದ್ದು ಆಪ್ತರ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸಿದ್ದರಾಮಯ್ಯ ಭೇಟಿ ಮಾಡಿ ಚರ್ಚೆ ಮಾಡಿರುವ ನಾಯಕರು, ಡಿ.ಕೆ.ಒನ್ ಮ್ಯಾನ್ ಶೋ ಮಾಡಲು ಹೊರಟಿದ್ದಾರೆ.ನಮ್ಮನ್ನು ಲೆಕ್ಕಕ್ಕೆ ಇಟ್ಟುಕೊಳ್ಳದಂತೆ ಮಾತನಾಡುತ್ತಿದ್ದಾರೆ.ಮೊದಲು ಅವ್ರನ್ನು ಕಂಟ್ರೋಲ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಭಾರತ್ ಜೋಡೋ ಸಮಿತಿ ರಚನೆ ನೆಪದಲ್ಲಿ ಸಿದ್ದರಾಮಯ್ಯ ಆಪ್ತರಿಗೆ ಡಿ.ಕೆ.ಶಿವಕುಮಾರ್ ಗುನ್ನಾ ಇಟ್ಟಿದ್ದಾರೆ ಎಂದು ಚರ್ಚೆಯಾಗಿದೆ. ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ.ದೇಶಪಾಂಡೆಗೆ ಯಾವುದೇ ಜವಾಬ್ದಾರಿ ನೀಡದೇ ಗೇಟ್ ಪಾಸ್ ನೀಡಿದ್ದಾರೆ.ಕಾಂಗ್ರೆಸ್ ಹಿರಿಯ ನಾಯಕನಿಗೆ ಪ್ರಮುಖ ಸ್ಥಾನ ಕೊಡದೇ ಸಿದ್ದರಾಮಯ್ಯ ಮೇಲಿನ ಸೇಡಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀರಿಸಿಕೊಂಡಿದ್ದಾರೆ ಎನ್ನಲಾಗಿದೆ.ಅಲ್ದೇ ನನಗೆ ಜವಾಬ್ದಾರಿ ಕೊಟ್ಟಿರುವ ಬಗ್ಗೆ ನಿಮಗೆ ಹೇಳ್ಬೇಕಾ ಎಂದು ಆರ್ ವಿ ದೇಶಪಾಂಡೆ ಮಾಧ್ಯಮಗಳ ಮೇಲೆ ಗರಂ ಆಗಿದ್ದಾರೆ.
ಒಟ್ಟಾರೆ, ಭಾರತ್ ಜೋಡೋ ಯಾತ್ರೆ ಮೂಲಕ ಕರ್ನಾಟಕಕ್ಕೆ ಕಾಂಗ್ರೆಸ್ ಯುವರಾಜ ಬರುತ್ತಿರುವ ಸಂದರ್ಭದಲ್ಲೇ ಕಾಂಗ್ರೆಸ್ ಪಕ್ಷದಲ್ಲಿದ್ದ ಆಂತರಿಕ ಕಚ್ಚಾಟ ಬೀದಿಗೆ ಬಂದಿದೆ.ಸಿದ್ದು ಹಾಗೂ ಡಿ.ಕೆ.ನಡುವೆ ಸೃಷ್ಟಿಯಾಗಿರುವ ಕಂದಕ, ಮುಂದೆ ಯಾವ ಸ್ವರೂಪ ಪಡೆಯಲಿದೆ ಅನ್ನೋದನ್ನು ಸದ್ಯ ಕಾದು ನೋಡಬೇಕಿದೆ.
ಗೋವಿಂದ್, ಪೊಲಿಟಿಕಲ್ ಬ್ಯೂರೋ, ಪವರ್ ಟಿವಿ