ಬೆಂಗಳೂರು : ಇಷ್ಟು ದಿನ ರಾಜ್ಯ ಕಾಂಗ್ರೆಸ್‌ನಲ್ಲಿ ಗುಪ್ತಗಾಮಿನಿಯಂತಿದ್ದ ಬಣ ರಾಜಕೀಯ ಈಗ ಸ್ಪೋಟಗೊಂಡಿದೆ. ಅದರಲ್ಲೂ ರಾಹುಲ್ ಗಾಂಧಿಯವರ ಭಾರತ್ ಜೋಡೋ ಪಾದಯಾತ್ರೆಗೆ ಸಹಕಾರ ನೀಡದ, ಸಿದ್ದರಾಮಯ್ಯ ಬಣದ ವಿರುದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಿದ್ದತಾ ಸಭೆಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರ ಆಪ್ತರಾದ ಮಾಜಿ ಸಚಿವ ಆರ್.ವಿ.ದೇಶಪಾಂಡೆ ವಿರುದ್ಧ ನೇರ ವಾಗ್ದಾಳಿಯನ್ನೂ ನಡೆಸಿದ್ದಾರೆ.
ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಹತ್ತು ದಿನ ಸಂಚರಿಸಲಿದೆ. ಈ ಅವಧಿಯಲ್ಲಿ ಪ್ರತಿದಿನ ಇಬ್ಬರು ಶಾಸಕರಿಗೆ ಯಾತ್ರೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಲಾಗುತ್ತದೆ. ಪ್ರತಿಯೊಬ್ಬ ಶಾಸಕರಿಗೂ ಕನಿಷ್ಟ 5000 ಜನರನ್ನು ಕರೆತರುವಂತೆ ಸೂಚನೆಯನ್ನೂ ನೀಡಲಾಗಿದೆ. ಆದರೆ, ಕೆಪಿಸಿಸಿ ಅಧ್ಯಕ್ಷರು ನಿಗದಿ ಪಡಿಸಿರುವ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿದ್ದರಾಮಯ್ಯ ಬಣದ ಶಾಸಕರು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ. ಅಂತಹ ಶಾಸಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಡಿ.ಕೆ.ಶಿವಕುಮಾರ್ ನೇರ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ 2023ರ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯಯನ್ನೂ ಪ್ರಾರಂಭಿಸಿರುವುದಾಗಿ ಡಿ.ಕೆ.ಶಿವಕುಮಾರ್ ಸುಳಿವು ನೀಡಿದ್ದಾರೆ. ಪಕ್ಷಕ್ಕಾಗಿ ಕೆಲಸ ಮಾಡುವ ಶಾಸಕರ ಚಟುವಟಿಕೆಗಳನ್ನು ಗಮನಿಸಿ ವರದಿ ಮಾಡಲು ಎಐಸಿಸಿಯಿಂದ 11 ಜನರ ರಹಸ್ಯ ತಂಡವೊಂದನ್ನು ನೇಮಕ ಮಾಡಲಾಗಿದೆ. ಆ ತಂಡದ ವರದಿ ಆದರಿಸಿ, ಆಕಾಂಕ್ಷಿಗಳ ಪಟ್ಟಿ ತಯಾರಿಸಲಾಗುತ್ತದೆ. ಸಂಭವನೀಯರ ಪಟ್ಟಿಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ತೋರಿಸುವುದಿಲ್ಲ. ಕೇವಲ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ರಾಹುಲ್ ಗಾಂಧಿ, ಸೋನಿಯಾಗಾಂಧಿಯವರಿಗೆ ಮಾತ್ರ ತೋರಿಸಿ, ತಾವು ಶಿಫಾರಸ್ಸು ಮಾಡಿದವರಿಗೆ ಮಾತ್ರ ಟಿಕೆಟ್ ಕೊಡಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಬಹಿರಂಗವಾಗಿಯೇ ಹೇಳಿದ್ದಾರೆ. ಆ ಮೂಲಕ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯಗಿಂತ ತಾವೇ ಪವರ್ ಫುಲ್ ಎಂಬ ಸಂದೇಶ ರವಾನೆ ಮಾಡಲು ಡಿ.ಕೆ.ಶಿವಕುಮಾರ್ ಪ್ರಯತ್ನಿಸಿದ್ದಾರೆ.
ಇತ್ತ, ಪಾದಯಾತ್ರೆಗೆ ಶಾಸಕರು ಸಹಕಾರ ಕೊಡುತ್ತಿಲ್ಲ ಎಂಬ ಡಿಕೆಶಿ ಹೇಳಿಕೆಗೆ ಮಂಡ್ಯದಲ್ಲಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ರು. ನನಗೆ ಅದ್ರ ಬಗ್ಗೆ ಗೊತ್ತಿಲ್ಲ.. ಅವರನ್ನೇ ಕೇಳಿ ಅಂತ ನುಣುಚಿಕೊಂಡ್ರು.
ಇದೇ ವೇಳೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವಕ್ಕಿಂತಲೂ ತಮ್ಮ ನೇತೃತ್ವದಲ್ಲಿ ನಡೆದ ಮೇಕೆದಾಟು-ಬೆಂಗಳೂರು ಪಾದಯಾತ್ರೆಯೇ ಅತ್ಯಂತ ಯಶಸ್ವಿಯಾಗಿತ್ತು, ವ್ಯವಸ್ಥಿತವಾಗಿತ್ತು ಎಂದು ಡಿ.ಕೆ.ಶಿವಕುಮಾರ್ ಆತ್ಮ ಪ್ರಶಂಸೆ ಮಾಡಿಕೊಂಡು ಅಚ್ಚರಿ ಮೂಡಿಸಿದ್ದಾರೆ. ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ನಡೆಯುತ್ತಿದ್ದ ಶೀತಲ ಸಮರ ಈಗ ಸ್ಪೋಟಗೊಂಡಿದೆ. ಸಿದ್ದರಾಮಯ್ಯ ಬಣದ ವಿರುದ್ದ ಡಿ.ಕೆ.ಶಿವಕುಮಾರ್ ಬಹಿರಂಗ ಯುದ್ದಕ್ಕಿಳಿದಿದ್ದಾರೆ.