Thursday, January 23, 2025

ವಿದ್ಯುತ್ ಸಂಪರ್ಕಕ್ಕೆ NOC ಕಡ್ಡಾಯವಲ್ಲ

ಬೆಂಗಳೂರು : ಈ ವರ್ಷದ ಜನವರಿ 24 ರಂದು ನಗರಾಭಿವೃದ್ದಿ ಇಲಾಖೆಯ ಉನ್ನತಾಧಿಕಾರಿಗಳ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಸರ್ಕಾರ ಜಾರಿಗೊಳಿಸಿದೆ. ರಾಜ್ಯದ ವಾಣಿಜ್ಯ ಮತ್ತು ವಾಣಿಜ್ಯೇತರ ಕಟ್ಟಡಗಳಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ಕೊಡುವ ಸಂದರ್ಭದಲ್ಲಿ ಸರ್ಕಾರದ ನಿರಾಕ್ಷೇಪಣಾ ಪತ್ರವನ್ನು ಹಾಜರು ಪಡಿಸುವುದು ಕಡ್ಡಾಯವಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದ್ದು, ಕರ್ನಾಟಕ ರಾಜ್ಯ ಪತ್ರದಲ್ಲೂ ಪ್ರಕಟಿಸಲಾಗಿದೆ.

ರಾಜ್ಯದಲ್ಲಿ ಹೊಸ ಕೈಗಾರಿಕೆಗಳನ್ನು ಪ್ರಾರಂಭಿಸುವ ಸಂದರ್ಭದಲ್ಲಿ, ವಿದ್ಯುತ್ ಸಂಪರ್ಕ ನೀಡುವಾಗ ಅನಗತ್ಯ ವಿಳಂಬ ಮಾಡಲಾಗುತ್ತಿತ್ತು. ಇದರಿಂದ ಸ್ಟಾರ್ಟಪ್ ಉದ್ಯಮಗಳಿಗೆ ತೊಂದರೆಯಾಗುತ್ತಿತ್ತು. ಹಾಗಾಗಿ ಕೆಇಆರ್‌ಸಿ ನಿಯಮಾವಳಿಗೆ ತಿದ್ದುಪಡಿ ತಂದು ವಿದ್ಯುತ್ ಸಂಪರ್ಕ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗಿತ್ತು. ಹಾಗಾಗಿ ಇದೇ ವರ್ಷದ ಜನವರಿ 24 ರಂದು ನಗರಾಭಿವೃದ್ದಿ ಇಲಾಖೆ ಮತ್ತು ಇಂಧನ ಇಲಾಖೆಯ ಅಧಿಕಾರಿಗಳ ಜಂಟಿ ಸಭೆಯಲ್ಲಿ ಕೆಇಆರ್‌ಸಿ ನಿಯಮ 9ಕ್ಕೆ ತಿದ್ದುಪಡಿ ತಂದು, ಕಡ್ಡಾಯವಾಗಿ NOC ಪಡೆಯುವ ನಿಯಮವನ್ನು ಕೈ ಬಿಡಲು ಶಿಫಾರಸ್ಸು ಮಾಡಲಾಗಿತ್ತು.

KERC ನಿಯಮಾವಳಿ ತಿದ್ದುಪಡಿ ಮಾಡಿ, NOC ಕಡ್ಡಾಯ ನಿಯಮಾವಳಿ ರದ್ದು ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅದರಲ್ಲೂ ಪ್ರಮುಖವಾಗಿ ಇಂಧನ ಇಲಾಖೆಯಲ್ಲೂ ಬೇರು ಬಿಟ್ಟಿರುವ ಗುತ್ತಿಗೆದಾರರು ಮತ್ತು ಕಮೀಷನ್ ಏಜೆಂಟ್‌ಗಳಿಗೆ ಈ ತಿದ್ದುಪಡಿಯಿಂದ ವರದಾನವಾದಂತೆ ಆಗಿದೆ ಎನ್ನಲಾಗಿದೆ. ಜತೆಗೆ ರಾಜ್ಯದ ವಿವಿಧೆಡೆಗಳಲ್ಲಿ ಸರ್ಕಾರಿ ಜಮೀನು, ರಾಜಕಾಲುವೆ, ಕೆರೆ ಅಂಗಳಗಳನ್ನು ಒತ್ತುವರಿ ಮಾಡಿಕೊಂಡು ಅಕ್ರಮ ಕಟ್ಟಡಗಳನ್ನು ನಿರ್ಮಾಣ ಮಾಡುವ ಭೂಗಳ್ಳರಿಗೂ ಸಹ ಸರ್ಕಾರದ ಈ ತಿದ್ದುಪಡಿಯಿಂದ ಅನುಕೂಲ ಮಾಡಿಕೊಟ್ಟಂತೆ ಆಗಿದೆ. ವಿದ್ಯುತ್ ಸರಬರಾಜು ಮಂಡಳಿ ವಿದ್ಯುತ್ ಸಂಪರ್ಕ ನೀಡಿರುವುದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು, ಅಕ್ರಮ ನಿರ್ಮಾಣಗಳನ್ನು ಸಕ್ರಮಗೊಳಿಸಲು ಅನುಕೂಲವಾಗಲಿದೆ ಎಂಬ ಆರೋಪವೂ ಕೇಳಿಬಂದಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಅತಿವೃಷ್ಟಿಯಿಂದಾಗಿ ಹಲವು ಬಡಾವಣೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲು ರಾಜಕಾಲುವೆ ಮತ್ತು ಕೆರೆ ಅಂಗಳ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿರುವ ಅಕ್ರಮ ಕಟ್ಟಡಗಳೇ ಕಾರಣ ಎಂಬುದು ಸಾಬೀತಾಗಿದೆ. ಬಿಬಿಎಂಪಿ ಅಧಿಕಾರಿಗಳು ಆ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಮುಂದಾದಾಗ, ಕಟ್ಟಡಗಳ ಮಾಲೀಕರು ತಮ್ಮ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ ನೀಡಿರುವುದನ್ನು ಹಾಗೂ ಬಿಬಿಎಂಪಿಗೆ ಕಂದಾಯ ಪಾವತಿ ಮಾಡಿರುವ ರಶೀದಿಗಳನ್ನು ಅಧಿಕಾರಿಗಳಿಗೆ ತೋರಿಸಿ, ಆ ಮೂಲಕ ತಮ್ಮ ಕಟ್ಟಡಗಳು ಅಕ್ರಮ ನಿರ್ಮಾಣಗಳಲ್ಲ ಎಂದು ಸಾಬೀತು ಪಡಿಸಲು ಪ್ರಯತ್ನಿಸಿದ್ದರು. ಈಗ ಸರ್ಕಾರ NOC ಕೊಡುವುದನ್ನೇ ರದ್ದು ಪಡಿಸಿರುವುದರಿಂದ ಇಂತಹ ಅಕ್ರಮ ಕಟ್ಟಡಗಳಿಗೆ ಮತ್ತಷ್ಟು ಬಲ ತುಂಬಿದಂತಾಗಿದೆ.

RELATED ARTICLES

Related Articles

TRENDING ARTICLES