Wednesday, January 22, 2025

ಸಿಎಂ ಬೊಮ್ಮಾಯಿ ಭೇಟಿಯಾಗಿ ಮಾತುಕತೆ ನಡೆಸಿದ ಕೇರಳ ಸಿಎಂ ವಿಜಯನ್

ಬೆಂಗಳೂರು: ರಾಜ್ಯದ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ, ವನ್ಯಜೀವಿಧಾಮಗಳಲ್ಲಿ ಯಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಕೇರಳ ಸರ್ಕಾರಕ್ಕೆ ಸ್ಪಷ್ಟಪಡಿಸಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಇಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ದಕ್ಷಿಣ ವಲಯ ಪರಿಷತ್ತಿನ ಸಭೆಯಲ್ಲಿ ತೀರ್ಮಾನಿಸಿದಂತೆ ದ್ವಿಪಕ್ಷೀಯ ಮಾತುಕತೆ ನಡೆಸಲು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಆಗಮಿಸಿದ್ದರು. ಕಾಂಗಾಡ್-ಕಾಣಿಯೂರು ರೈಲು ಮಾರ್ಗ ಸೇರಿದಂತೆ ವಿವಿಧ ರೈಲ್ವೆ ಮತ್ತು ಹೆದ್ದಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಹಮತಿ ನೀಡುವಂತೆ ಕೇರಳ ಸರ್ಕಾರ ಕೋರಿತು. ಪ್ರಸ್ತಾಪಿತ ಕಾಞಂಗಾಡ್–ಕಾಣಿಯೂರು ರೈಲು ಮಾರ್ಗವು ಕೇರಳದಲ್ಲಿ 40 ಕಿ.ಮೀ. ಹಾಗೂ ಕರ್ನಾಟಕದಲ್ಲಿ 31 ಕಿ.ಮೀ. ಮಾರ್ಗ ಹೊಂದಿದ್ದು, ರಾಜ್ಯಕ್ಕೆ ಇದರಿಂದ ಹೆಚ್ಚಿನ ಅನುಕೂಲಗಳಿಲ್ಲ. ಅಲ್ಲದೆ ಪಶ್ಚಿಮ ಘಟ್ಟದ ಜೀವ ವೈವಿಧ್ಯ ಸೂಕ್ಷ್ಮ ಪ್ರದೇಶದಲ್ಲಿ ಹಾದು ಹೋಗುವ ಕಾರಣ ಸಹಮತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದು ತಿಳಿಸಿದರು.

ಹಳೆಯ ಯೋಜನೆಯಾದ ತಲಚೇರಿ-ಮೈಸೂರು ರೈಲು ಯೋಜನೆಯನ್ನೂ ಪ್ರಸ್ತಾಪಿಸಿದರು. ಆದರೆ ಈ ಯೋಜನೆಯ ರೈಲು ಮಾರ್ಗವು ಬಂಡಿಪುರ-ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮಧ್ಯಭಾಗದಲ್ಲಿ ಹಾದುಹೋಗುವುದರಿಂದ ಅಲ್ಲಿನ ವನ್ಯ ಜೀವಿ ಸಂಪತ್ತು ಹಾಗೂ ಅರಣ್ಯ ಸಂಪತ್ತಿಗೆ ಹಾನಿಯಾಗುವುದು. ಆದ್ದರಿಂದ ಇದಕ್ಕೆ ಸಮ್ಮತಿಸಲು ಸಾಧ್ಯವಿಲ್ಲ ಎಂದು ತಿಳಿಸಲಾಯಿತು. ಆಗ ಭೂಗತ ರೈಲು ಮಾರ್ಗ ನಿರ್ಮಿಸುವ ಕುರಿತು ಕೇರಳ ಸರ್ಕಾರವು ಪ್ರಸ್ತಾಪಿಸಿತು.

ಆದರೆ ಇದರಿಂದಲೂ ನಿರ್ಮಾಣ ಚಟುವಟಿಕೆ ಸಂದರ್ಭದಲ್ಲಿ ಪರಿಸರ ಹಾನಿಯಾಗುವುದು. ಆದ್ದರಿಂದ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಲಾಯಿತು. ಕೇರಳಕ್ಕೆ ಬಂಡಿಪುರ ರಾಷ್ಟ್ರೀಯ ಉದ್ಯಾನದ ಮೂಲಕ ರಾತ್ರಿವೇಳೆ ಎರಡು ಬಸ್ಗಳು ಸಂಚರಿಸುತ್ತಿದ್ದು, 4 ಬಸ್​​ಗಳಿಗೆ ಅನುಮತಿ ನೀಡುವಂತೆ ಕೋರಿದರು. ಇದಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

RELATED ARTICLES

Related Articles

TRENDING ARTICLES