Thursday, January 23, 2025

ಮಕ್ಕಳ ಕಳ್ಳರ ವದಂತಿಗೆ ಬೆಚ್ಚಿಬಿದ್ದ ಹಾವೇರಿ ಜನತೆ

ಹಾವೇರಿ : ಕಳೆದೊಂದು ವಾರದಿಂದ ಹಾವೇರಿ ಜಿಲ್ಲೆಯಲ್ಲಿ ಮಕ್ಕಳ‌ ಕಳ್ಳರದ್ದೇ ಸುದ್ದಿ. ಮಕ್ಕಳ ಕಳ್ಳತನದ ವದಂತಿಯಿಂದ ಪಾಲಕರು ಆತಂಕಗೊಂಡಿದ್ದಾರೆ. ಶಾಲೆಯ ಅಕ್ಕ ಅಕ್ಕಪಕ್ಕದಲ್ಲಿ ಯಾರಾದ್ರು ಅಪರಿಚಿತರು ಕಂಡರೆ ಸಾಕು, ಸಾರ್ವಜನಿಕರು ಅವರನ್ನ ಹಿಗ್ಗಾಮುಗ್ಗಾ ಥಳಿಸುತ್ತಿದ್ದಾರೆ. ಸವಣೂರು ತಾಲೂಕು ತವರಮೆಳ್ಳಿಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬಳನ್ನು ಸ್ಥಳೀಯರು ಕೂಡಿಹಾಕಿ ಥಳಿಸಿದ್ದಾರೆ. ಬಂಕಾಪುರ, ಶಿಗ್ಗಾಂವ್, ನೆಲೋಗಲ್ಲ, ದೇವಗಿರಿ ಗ್ರಾಮಗಳಲ್ಲೂ ಮಕ್ಕಳ ಕಳ್ಳರನ್ನು ಹಿಡಿದು ಥಳಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಯಾವುದೋ ರಾಜ್ಯದಲ್ಲಿ ನಡೆದ ಘಟನೆಗಳ ವಿಡಿಯೋವನ್ನು ಇಲ್ಲಿಯೇ ಆಗಿದ್ದು ಎಂಬ ರೀತಿ ಬಿಂಬಿಸಿ ವಾಟ್ಸಾಪ್, ಫೇಸ್‌ಬುಕ್‌ಗಳಲ್ಲಿ ಹಾಕಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಮಕ್ಕಳ ಕಳ್ಳರ ಭಯ ಹೆಚ್ಚಿದೆ. ಸಂಶಯಾಸ್ಪದವಾಗಿ ಕಾಣುವ ವ್ಯಕ್ತಿಗಳನ್ನು ವಿಚಾರಿಸುತ್ತಿದ್ದಾರೆ. ಕೂಡಿ ಹಾಕಿ ಥಳಿಸುತ್ತಿದ್ದಾರೆ. ಕೆಲವು ಗ್ರಾಮಗಳಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಹೆದರುತ್ತಿದ್ದಾರೆ.

ಈ ಬಗ್ಗೆ ಎಚ್ಚೆತ್ತುಕೊಂಡಿರೋ ಪೊಲೀಸರು, ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಮಕ್ಕಳ ಕಳ್ಳತನದ ಯಾವುದೇ ಘಟನೆ ನಡೆದಿಲ್ಲ. ಮಕ್ಕಳ ಕಳ್ಳರ ವದಂತಿ ಬಗ್ಗೆ ಸಾರ್ವಜನಿಕರು ಕಿವಿಗೊಡಬಾರದು. ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

ಮಕ್ಕಳ ಕಳ್ಳರೆಂದು ಅಪರಿಚಿತರನ್ನ ಸಾರ್ವಜನಿಕರು ಒಂದು ಕಡೆ ಥಳಿಸುತ್ತಿದ್ರೆ. ಮತ್ತೊಂದೆಡೆ ಮಕ್ಕಳನ್ನ ಶಾಲೆಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳ ಕಳ್ಳರು ಬಂದಿದ್ದಾರೆ ಎನ್ನುವ ವದಂತಿ ಜಿಲ್ಲೆಯ ಜನರ ನಿದ್ದೆಗೆಡಿಸಿದೆ.

ವೀರೇಶ್​ ಬಾರ್ಕಿ, ಪವರ್ ಟಿವಿ, ಹಾವೇರಿ

RELATED ARTICLES

Related Articles

TRENDING ARTICLES