ಬೆಂಗಳೂರು: ನಟ ಶರಣ್ ಅಭಿನಯದ ಅತೀ ನಿರೀಕ್ಷೆಯ ಗುರು ಶಿಷ್ಯರು ಚಿತ್ರವನ್ನು ಪ್ರಾದೇಶಿಕ ಸೆನ್ಸಾರ್ ಮಂಡಳಿಯು ವೀಕ್ಷಿಸಿ, ಯಾವುದೇ ಕಟ್ ಅಥವಾ ಧ್ವಣಿ ಕಡಿತ ಮಾಡದೇ ‘ಯು’ ಪ್ರಮಾಣಪತ್ರ ನೀಡಿದೆ.
ಈ ಚಿತ್ರವನ್ನು ಬಹಳ ಇಷ್ಟಪಟ್ಟಿರುವ ಸೆನ್ಸಾರ್ ಮಂಡಳಿಯ ಸದಸ್ಯರು, ಇದೊಂದು ಮನೆ ಮಂದೆಯೆಲ್ಲರೂ ಒಟ್ಟಾಗಿ ಕುಳಿತು ನೋಡುವ ಮನರಂಜನಾ ಚಿತ್ರ ಆಗಿದೆ ಎಂದು ಪ್ರಸಂಶೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಇಂಥದ್ದೊಂದು ಪ್ರಾಮಾಣಿಕ ಪ್ರಯತ್ನವನ್ನು ಮಾಡಿರುವ ಚಿತ್ರತಂಡದವಕ್ಕೆ ಸೆನ್ಸಾರ್ ಮಂಡಳಿ ಬೆನ್ನು ತಟ್ಟಿದ್ದಾರೆ.
ಇನ್ನು ‘ಗುರು ಶಿಷ್ಯರು’ ಚಿತ್ರವನ್ನ ಲಡ್ಡು ಸಿನಿಮಾ ಹೌಸ್ ಹಾಗೂ ತರುಣ್ ಸುಧೀರ್ ಕ್ರಿಯೇಟಿವ್ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಮುಂದಿನ ಶುಕ್ರವಾರ (ಸೆ.23) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಈ ಚಿತ್ರದ ಎಲ್ಲ ಪ್ರದೇಶದ ಹಕ್ಕುಗಳು ಈಗಾಗಲೇ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ.
ಗುರು ಶಿಷ್ಯರು ಒಟ್ಟು 2 ಗಂಟೆ 40 ನಿಮಿಷಗಳ ಅವಧಿಯ ಚಿತ್ರವಾಗಿದ್ದು, 90 ರ ದಶಕದ ಕಾಲಘಟ್ಟದ ಕಥೆಯೊಂದನ್ನು ಚಿತ್ರದಂಡ ಹೆಣೆದಿದೆ. ಗ್ರಾಮೀಣ ಕರ್ನಾಟಕದ ಪುಟ್ಟ ಊರೊಂದರಲ್ಲಿ ನಡೆಯುವ ಈ ಕಥೆಯಲ್ಲಿ ಖೋಖೋ ಕ್ರೀಡೆಯು ಪ್ರಮುಖ ಪಾತ್ರವಹಿಸಲಿದ್ದು, ನಟ ಶರಣ್ ಶಿಕ್ಷಕರಾಗಿ ಪಾತ್ರವಹಿಸಿದ್ದಾರೆ. ಶರಣ್ಗೆ ಜತೆಗೆ ನಟಿಯಾಗಿ ನಿಶ್ವಿಕಾ ನಾಯ್ಡು ಬಣ್ಣ ಹಚ್ಚಿದ್ದಾರೆ.
ಈ ಚಿತ್ರದಲ್ಲಿ ಶರಣ್ ಗುರುವಾಗಿ ನಟಿಸಿದರೆ, ಅವರಿಗೆ ಶಿಷ್ಯಂದಿರಾಗಿ ಅವರ ಮಗ ಹೃದಯ್, ನೆನಪಿರಲಿ ಪ್ರೇಮ್ ಮಗ ಏಕಾಂತ್, ರವಿಶಂಕರ್ ಗೌಡ ಮಗ ಸೂರ್ಯ, ನವೀನ್ ಕೃಷ್ಣ ಮಗ ರ‍್ಷಿತ್ ಮತ್ತು ಬುಲೆಟ್ ಪ್ರಕಾಶ್ ಮಗ ರಕ್ಷತ್ ನಟಿಸಿದ್ದಾರೆ.
ನಟ ಶರಣ್ ನಿರ್ಮಾಣದಲ್ಲಿ ಗುರು ಶಿಷ್ಯರು ಸಿನಿಮಾ ಮೂರನೇ ಸಿನಿಮಾವಾಗಿದೆ. ನಿರ್ದೇಶಕ ತರುಣ್ ಸುಧೀರ್ ನಿರ್ಮಾಣದ ಮೊದಲ ಚಿತ್ರವಾಗಿದೆ. ಈ ಹಿಂದೆ ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್ಮ್ಯಾನ್ ಚಿತ್ರವನ್ನು ನಿರ್ದೇಶಿಸಿದ್ದ ಜಡೇಶ್ ಹಂಪಿ, ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ.