Wednesday, January 22, 2025

ರಾಹುಲ್​ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಕನಿಷ್ಠ 5 ಲಕ್ಷ ಜನ ಭಾಗಿ; ಸಿದ್ದರಾಮಯ್ಯ ವಿಶ್ವಾಸ

ಮಂಡ್ಯ: ಕಳೆದ ಸೆಪ್ಟೆಂಬರ್​ 7 ರಿಂದ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಇಂತಹ ಐತಿಹಾಸಿಕ ಪಾದಯಾತ್ರೆ ಯಾವ ನಾಯಕ, ಪಕ್ಷಗಳಿಂದಲೂ ಆಗಿಲ್ಲ. ಕೆಲವರು ರಥಯಾತ್ರೆ, ಪಾದಯಾತ್ರೆ ಮಾಡಿದ್ದಾರೆ. ಒಮ್ಮೆಲೆ 152 ದಿನಗಳಿಗೂ ಹೆಚ್ಚು ಕಾಲ 3,570 ಕಿ.ಮೀ ನಡೆಯೋದು ಸುಲಭವಲ್ಲ. ಅದು ತುಂಬಾ ಕಷ್ಟದ ಮಾತು ಎಂದು ದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ಮಂಡ್ಯದ ಖಾಸಗಿ ಸಮುದಾಯ ಭವನದಲ್ಲಿ ಮಾತನಾಡಿದ ಅವರು, ದೇಶದ ಹಿತದೃಷ್ಟಿಯಿಂದ ರಾಹುಲ್ ಗಾಂಧಿ ಪಾದಯಾತ್ರೆ ಅಂತಹ ಸಾಹಸಕ್ಕೆ ಕೈ ಹಾಕಿದ್ದಾರೆ. ನಾವೆಲ್ಲರೂ ಅವರ ಈ ನಿರ್ಧಾರಕ್ಕೆ ಕೈ ಜೋಡಿಸಬೇಕು. ಮಂಡ್ಯದಲ್ಲಿ ಮೂರು ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ. ರಾಜ್ಯದಲ್ಲಿ ಅಕ್ಟೋಬರ್ 3, 6, 7ರಂದು ಪಾದಯಾತ್ರೆ ಇರಲಿದೆ. ನಾವೆಲ್ಲರೂ ಒಂದು ದಿನವಾದ್ರೂ ಪಾದಯಾತ್ರೆ ಮಾಡಲೇಬೇಕು ಎಂದರು.

ಇನ್ನು ಬಿಜೆಪಿ ಸರ್ಕಾರದ ವಿರದ್ಧ ಹರಿಹಾಯ್ದ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಬಡವರ ರಕ್ತ ಕುಡಿಯುತ್ತಿದೆ. ಹಾಲು, ಮೊಸರು, ಕಡ್ಲೇಪುರಿಗೂ ಟ್ಯಾಕ್ಸ್ ಹಾಕ್ತಿದ್ದಾರೆ. ಇವರನ್ನೆಲ್ಲ ಮನುಷ್ಯರು ಅನ್ಬೇಕೋ, ರಾಕ್ಷಸರು ಅನ್ಬೇಕೋ ಎಂದು ಮಾಜಿ ಸಿಎಂ  ಬೆಲೆ ಏರಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ನಾಡಿನಲ್ಲಿ ಜಾತಿ-ಜಾತಿಗಳ ಮಧ್ಯೆ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಹೀಗಾಗಿ ಒಡೆದ ಮನಸ್ಸು ಒಗ್ಗೂಡಿಸಲು ರಾಹುಲ್ ಗಾಂಧಿ ಅವರು ಯಾತ್ರೆ ಮಾಡ್ತಿರೋದು. ನೀವೆಲ್ಲರೂ ಕೈ ಜೋಡಿಸಿ. ಇದೊಂದು ಐತಿಹಾಸಿಕ ಪಾದಯಾತ್ರೆಯಾಗಲಿ. ಮಂಡ್ಯಕ್ಕೆ ಒಳ್ಳೆಯ ದಿನಗಳೂ ಬರ್ತಿದ್ದಾವೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕದಲ್ಲಿ ಒಟ್ಟು 8 ಜಿಲ್ಲೆಯ 510 ಕಿಮೀ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಬಳ್ಳಾರಿಯಲ್ಲಿ ಮಾತ್ರ ಬೃಹತ್ ಸಾರ್ವಜನಿಕ ಸಭೆ ನಡೆಯುತ್ತದೆ. ಬಳ್ಳಾರಿ ಸಭೆಯಲ್ಲಿ ಕನಿಷ್ಠ 5 ಲಕ್ಷ ಜನ ಭಾಗಿಯಾಗುತ್ತಾರೆ. ವಕೀಲರು, ರೈತರು, ಕಾರ್ಮಿಕರು, ಸಂಘ ಸಂಸ್ಥೆಗಳು ಭಾಗಿಯಾಗಲಿದ್ದಾರೆ.

ಇನ್ನು ಪ್ರಧಾನಿಯಾಗಿ ನರೇಂದ್ರ ಮೋದಿಯಾದ ಮೇಲೆ ಧರ್ಮ ರಾಜಕೀಯಕ್ಕೆ ಕುಮ್ಮಕ್ಕು ನೀಡುವುದು ನಡೆಯುತ್ತಿದೆ. ಸಂವಿಧಾನ ಧರ್ಮ ರಾಜಕಾರಣ ಮಾಡಬಾರದು ಅನ್ಸುತ್ತೆ. ಇದು ಬಹುತ್ವದಿಂದ ಕೂಡಿರುವ ರಾಷ್ಟ್ರ. ಎಲ್ಲಾ ಜನಾಂಗ, ಧರ್ಮದವರು ಇರುವ ದೇಶ ನಮ್ಮದು.
ವೈವಿಧ್ಯತೆ ಏಕತೆ ಕಾಣೋದು ಈ ದೇಶದ ತಿರುಳು. ಕುವೆಂಪು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ ನಮ್ಮದು. ಸರ್ವ ಜನಾಂಗದ ಶಾಂತಿಯ ತೋಟ ಆಗೋಕೆ ಬಿಜೆಪಿ ಬಿಡ್ತಿಲ್ಲ. ಜಾತಿ, ಧರ್ಮದ ಹೆಸರಲ್ಲಿ ಜನರ ಮನಸ್ಸು ಒಡೆಯುತ್ತಿದೆ. ಜಾತಿ, ಧರ್ಮದ ವಿಷ ಹಾಕಿ ಮನಸ್ಸು ಒಡೆಯುತ್ತಿದೆ ಎಂದು ಕೇಂದ್ರದ ಮೋದಿ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದರು.

RELATED ARTICLES

Related Articles

TRENDING ARTICLES