Wednesday, January 22, 2025

BDAದಿಂದಲೇ ಬೆಂಗಳೂರಿನಲ್ಲಿ ನಡೆದಿದೆ ಅಕ್ರಮ ಒತ್ತುವರಿ

ಬೆಂಗಳೂರು : ಮಳೆ ಬಂದರೆ ಮಕಾಡೆ ಮುಳುಗುವ ರಾಜಧಾನಿ ಭೂಗಳ್ಳರ ಕೈಯಲ್ಲಿದ್ಯಾ ಎನ್ನುವ ಅನುಮಾನ ಕಾಡತೊಡಗಿದೆ. ಜನ ಸಾಮಾನ್ಯರು ಮಾತ್ರ ಅಲ್ಲ. ಬೆಂಗಳೂರಿನ ಅಭಿವೃದ್ಧಿ ಹೊಣೆ ಹೊತ್ತಿರುವವರಿಂದಲೇ ಬೆಂಗಳೂರಿನ ಭೂಮಿ ಕಬಳಿಕೆಯಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದಲೇ ಭಾರೀ ಪ್ರಮಾಣದ ಅಕ್ರಮ ಒತ್ತುವರಿಯಾಗಿದೆ ಎಂದರೆ ನಂಬ್ತೀರಾ..? ಹಾಗಾದರೆ ಈ ಸ್ಟೋರಿ ಓದಿ.

ಹೌದು, ಬೆಂಗಳೂರನ್ನು ಅಭಿವೃದ್ಧಿಪಡಿಸಿ ಜನರಿಗೆ ಸೂಕ್ತ ಸ್ಥಳದಲ್ಲಿ ನಿವೇಶನ ಅಭಿವೃದ್ದಿ ಮಾಡಿಕೊಡಬೇಕಾದ ಸ್ವತಃ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೇ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಅದರಲ್ಲೂ 23 ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವುದು ಇದೀಗ ಸರಕಾರದ ದಾಖಲೆಗಳಿಂದಲೇ ಹೊರಬಿದ್ದಿದೆ. ಈಗ ರಾಜಕಾಲುವೆ, ಕೆರೆ, ನೀರುಗಾಲುವೆ ಒತ್ತುವರಿ ಮಾಡಿದೋರು ಯಾರು ಅಂತ ಎಲ್ಲರನ್ನೂ ಗುಮಾನಿಯಿಂದಲೇ ನೋಡುವಂತಾಗಿದೆ. ಒಂದು ಕಡೆಯಿಂದ ಬಿಬಿಎಂಪಿ ಕೂಡ ನಕ್ಷೆ ಹಿಡಿದು ರಸ್ತೆಯಲ್ಲಿ ಓಡಾಡ್ತಿದೆ. ಇದರ ಮಧ್ಯೆ ಮಾಡೋದೆಲ್ಲಾ ಮಾಡಿ ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ BDA ಕೂತು ಬಿಟ್ಟಿದೆ. ಅಸಲಿಗೆ BDA ಮಾಡಿರುವ ಅಕ್ರಮ ಒತ್ತುವರಿ ಬೆಂಗಳೂರಿನಲ್ಲಿ ಯಾರೂ ಮಾಡಿರ್ಲಿಕ್ಕಿಲ್ಲ. ಅಷ್ಟು ಪ್ರಮಾಣದಲ್ಲಿ BDA ಒತ್ತುವರಿ ಮಾಡಿ ಕೆರೆಗಳನ್ನು ನಿರ್ಣಾಮ ಮಾಡಿದೆ.

BDA ಒತ್ತುವರಿ ಮಾಡಿರುವ ಬೆಂಗಳೂರಿನ 23 ಕೆರೆಗಳು ಯಾವ್ಯಾವು ಅಂತ ನೋಡೋದದ್ರೆ

BDA ಒತ್ತುವರಿ ಮಾಡಿರುವ ಕೆರೆಗಳು 

ಗೆದ್ದಲಹಳ್ಳಿ ಕೆರೆ – 126 ನಿವೇಶನ ನಿರ್ಮಾಣ
ಚಿಕ್ಕಮಾರನಹಳ್ಳಿ ಕೆರೆ – 115 ನಿವೇಶನ ನಿರ್ಮಾಣ
ಬಾಣಸವಾಡಿ ಕೆರೆ – 67 ನಿವೇಶನ ನಿರ್ಮಾಣ
ಚನ್ನಸಂದ್ರ ಕೆರೆ – 222 ನಿವೇಶನ ನಿರ್ಮಾಣ
ಶ್ರೀನಿವಾಗಿಲು ಅಮಾನಿಕೆರೆ – 486 ನಿವೇಶನ
ಬಿಳೇಕಹಳ್ಳಿ ಕೆರೆ – 312 ನಿವೇಶನ ನಿರ್ಮಾಣ
ನಾಗಸಂದ್ರ ಚೆನ್ನಮ್ಮಕೆರೆ – 328 ನಿವೇಶನ ನಿರ್ಮಾಣ
ತಿಪ್ಪಸಂದ್ರ ಕೆರೆ (3ನೇ ಹಂತ) – 234 ನಿವೇಶನ ನಿರ್ಮಾಣ
ತಿಪ್ಪಸಂದ್ರ ಕೆರೆ (2ನೇ ಹಂತ) – 13 ನಿವೇಶನ ನಿರ್ಮಾಣ
ಅಗರ ಕೆರೆ – 113 ನಿವೇಶನ ನಿರ್ಮಾಣ
ಎಳ್ಳುಕುಂಟೆ ಕೆರೆ – 161 ನಿವೇಶನ ನಿರ್ಮಾಣ
ಕಾಚರಕನಹಳ್ಳಿ ಕೆರೆ – 126 ನಿವೇಶನ ನಿರ್ಮಾಣ
ಹುಳಿಮಾವು ಕೆರೆ – 153 ನಿವೇಶನ ನಿರ್ಮಾಣ
ವೆಂಕಟರಾಯನಕೆರೆ – 130 ನಿವೇಶನ ನಿರ್ಮಾಣ
ನಾಗರಬಾವಿ ಕೆರೆ – 37 ನಿವೇಶನ ನಿರ್ಮಾಣ
ಚಳ್ಳಕೆರೆ – 71 ನಿವೇಶನ ನಿರ್ಮಾಣ
ದೊಮ್ಮಲೂರು ಕೆರೆ – 10 ನಿವೇಶನ ನಿರ್ಮಾಣ
ಮೇಸ್ತ್ರಿಪಾಳ್ಯ ಕೆರೆ – 23 ನಿವೇಶನ ನಿರ್ಮಾಣ
ಬೆನ್ನಿಗಾನಹಳ್ಳಿ ಕೆರೆ – 18 ನಿವೇಶನ ನಿರ್ಮಾಣ
ಹೆಣ್ಣೂರು ಕೆರೆ – 434 ನಿವೇಶನ ನಿರ್ಮಾಣ
ತಲಘಟ್ಟಪುರ ಕೆರೆ – 94 ನಿವೇಶನ ನಿರ್ಮಾಣ
ಕೇತಮಾರನಹಳ್ಳಿ ಕೆರೆ – 230 ನಿವೇಶನ ನಿರ್ಮಾಣ
ಮಂಗನಹಳ್ಳಿ ಕೆರೆ – 27 ನಿವೇಶನ ನಿರ್ಮಾಣ

ಇನ್ನೂ 2013 ಹಾಗೂ 2014ರಲ್ಲಿ ಬೆಂಗಳೂರಿನ ಜೀವನಾಡಿಗಳಾಗಿದ್ದ 23 ಜೀವಂತ ಕೆರೆಗಳನ್ನು BDA ಅಧಿಕಾರಿಗಳು ನುಂಗಿ ನೀರು ಕುಡಿದಿದ್ದಾರೆ. ಹೀಗೆ ಒತ್ತುವರಿ ಮಾಡಿರುವ ಕೆರೆಗಳನ್ನು ಸಮತಟ್ಟಾಗಿಸಿ ಲೇಔಟ್ ನಿರ್ಮಾಣ ಮಾಡಿ ಕೋಟಿ ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಈ ಬಗ್ಗೆ 2015 ರಲ್ಲಿ ಒತ್ತುವರಿ ಕಾನೂನು ಬದ್ಧಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿತ್ತು ಪ್ರಾಧಿಕಾರ. ಈ 23 ಕೆರೆ ಕೆಡಿಸಿ BDA ನಿರ್ಮಾಣ ಮಾಡಿದ್ದು 3,530 ನಿವೇಶನವನ್ನು.‌ 23 ಕೆರೆಗಳು ತಮ್ಮ ಮೂಲ ಸ್ವರೂಪ ಕಳೆದುಕೊಂಡಿವೆ ಎಂಬ ನೆಪವೊಡ್ಡಿ ಇಡೀ ಕೆರೆಗೆ ಕೆರೆಯೇ ಮುಚ್ಚಿರುವ BDA ಲೇಔಟ್, ಅಪಾರ್ಟ್ಮೆಂಟ್ ಗಳನ್ನು ನಿರ್ಮಾಣ ಮಾಡಿದೆ.

ಒಟ್ನಲ್ಲಿ ಜನಸಾಮಾನ್ಯರು ಒಂದು ಕಡೆ ಅರ್ಧಡಿ ಒಂದಡಿ ಅಂತ ಒತ್ತುವರಿ ಮಾಡಿಕೊಂಡು ಕೂತಿದ್ದರೆ ಇತ್ತ ಬೆಂಗಳೂರಿನ ಅಭಿವೃದ್ಧಿಯ ಹೊಣೆ ಹೊತ್ತಿರುವ BDA ಮಾತ್ರ ಜೀವಂತ ಕೆರೆಗಳನ್ನೇ ಮುಚ್ಚಿ ಎಕರೆಗಟ್ಟಲೇ ಜಮೀನು ಮಾಡಿಕೊಂಡು ಎಲ್ಲವನ್ನೂ ಮಾರಾಟ ಮಾಡಿ ಸಾವಿರಾರು ಕೋಟಿ ರೂಪಾಯಿಯನ್ನು ಅಕ್ರಮವಾಗಿ ಸಂಪಾದಿಸಿದೆ.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು.

RELATED ARTICLES

Related Articles

TRENDING ARTICLES