ಬೆಂಗಳೂರು : ಎರಡು ದಿನ ಅಬ್ಬರಿಸಿ ಬೊಬ್ಬಿರಿದಿದ್ದ ಪಾಲಿಕೆ ಜೆಸಿಬಿಗಳು ಐದನೇ ದಿನಕ್ಕೆ ಡಿಸೇಲ್ ಖಾಲಿಯಾದಂತೆ ತಣ್ಣಗಾಗಿದ್ವು. ಬಹುತೇಕ ಕಡೆಗಳಲ್ಲಿ ಮಾರ್ಕಿಂಗ್ ಮಾಡಿದ್ದು ಬಿಟ್ರೆ ಒತ್ತುವರಿ ತೆರವಿಗೆ ಪಾಲಿಕೆ ಇಂಜಿನಿಯರ್ ಮುಂದಾಗ್ಲಿಲ್ಲ. ಆದ್ರೂ, ಯಲಹಂಕ ಭಾಗದಲ್ಲಿ ಅಲ್ಲಲ್ಲಿ ಅಲ್ಪಸ್ವಲ್ಪ ಕಾರ್ಯಾಚರಣೆ ಆಗುತ್ತಿದೆ ಎಂಬಂತೆ ತೋರ್ಪಡಿಕೆಗೆ ಎಂಬಂತೆ ಪಾಲಿಕೆ ಕೆಲಸ ಮಾಡ್ತಿತ್ತು.
ಯಲಹಂಕ ಭಾಗದಲ್ಲಿ ಒತ್ತುವರಿ ತೆರವು ಕಾರ್ಯ 3 ದಿನಗಳಿಂದ ಆಮೆಗತಿಯಲ್ಲಿ ಸಾಗುತ್ತಿದೆ. ಈ ಭಾಗದಲ್ಲಿ ಪಾಲಿಕೆ ಸರ್ವೇ ಪ್ರಕಾರ 96 ಕಡೆ ಒತ್ತುವರಿಯಾಗಿದೆ ಎಂದು ಗುರುತಿಸಿದೆ. ಆದರೆ, ಈವರೆಗೆ ಕೇವಲ 5 ಒತ್ತುವರಿ ಮಾತ್ರ ತೆರವು ಮಾಡಿದೆ. ಕೇವಲ ಒಂದು ದೊಡ್ಡ ರಾಜಕಾಲುವೆ ಒತ್ತುವರಿ ತೆರವು ಬಿಟ್ಟರೆ, ಬಾಕಿ ಉಳಿದವೆಲ್ಲಾ ತೂಬುಗಾಲುವೆ ಒತ್ತುವರಿ ತೆರವಿನಲ್ಲೇ ಪಾಲಿಕೆ ಕಾಲಹರಣ ಮಾಡಿದೆ. ಪ್ರಭಾವಿಗಳ ಮನೆ ಗೇಟ್ ಹತ್ರ ಕೂಡಾ ಅಧಿಕಾರಿಗಳು ಸುಳಿಯಲಿಲ್ಲ. ಆದರೆ, ಬಡವರಿಗೆ ನೋಟಿಸ್ ನೀಡದೆ ಏಕಾಏಕಿ ಮನೆಗೆ ಜೆಸಿಬಿ ನುಗ್ಗಿಸ್ತಾರೆ ಎಂದು ಸಾರ್ವಜನಿಕ ವಲಯದಲ್ಲಿ ಪಾಲಿಕೆ ನಡೆಗೆ ಟೀಕೆ ಶುರುವಾಗಿದೆ.
ಇನ್ನು ದಾಸರಹಳ್ಳಿ ಭಾಗಕ್ಕೆ ಬಂದ್ರೆ ತೆರವು ಕಾರ್ಯಾಚರಣೆ ಅಧಿಕಾರಿಗಳ ಇಷ್ಟದಂತೆ ಸಾಗಿತ್ತು. ತೆರವು ಜಾಗದಲ್ಲಿ ಜೆಸಿಬಿ ಬಿಟ್ರೆ ಒಬ್ಬನೇ ಒಬ್ಬ ಅಧಿಕಾರಿಯೂ ಈ ಭಾಗಕ್ಕೆ ಸುಳಿದಿರಲಿಲ್ಲ. ರಾಜಕಾಲುವೆ ಮುಂಭಾಗದಲ್ಲಿ ಮಾತ್ರ 40 ಮೀಟರ್ ನಷ್ಟು ಮನಸೋಚ್ಛೆ ಅಗೆದ ಪಾಲಿಕೆ ಜೆಸಿಬಿ. ಈ ಜಾಗ ಒತ್ತುವರಿಯಾಗಿಲ್ಲ ಅಂತ ಡಾಕ್ಯುಮೆಂಟ್ ತೋರಿಸಿದ್ರೂ ಅದನ್ನು ನೋಡಲು ಯಾರೂ ಇರಲಿಲ್ಲ. 2012ರಲ್ಲಿ ಸರ್ವೇ ಮಾಡಿ ಸರ್ವೇ ನಂಬರ್ 32/38 ಒತ್ತುವರಿ ಯಾಗಿಲ್ಲ ಎಂದು ನ್ಯಾಯಾಲಯ ಆದೇಶ ನೀಡಿದೆ. ಆದರೆ, ಪಾಲಿಕೆ ಮಾತ್ರ ಕಾನೂನು ಬದ್ಧವಾಗಿ ತೆರವು ಮಾಡ್ತಿಲ್ಲ, ಏಕಾಏಕಿ ಬರ್ತಾರೆ ಜೆಸಿಬಿ ಮನೆಗೆ ನುಗ್ಗಿಸ್ತಾರೆ. ಡಾಕ್ಯುಮೆಂಟ್ ಕೊಟ್ಟರು ಪಾಲಿಕೆ ಅಧಿಕಾರಿಗಳು ನೋಡಲ್ಲ. ಬಡವರಿಗೆ ಒಂದು ನ್ಯಾಯ ಮಾಡ್ತಾರೆ. ದೊಡ್ಡವರ ಮನೆ ಗೇಟ್ ಹತ್ರವೂ ಹೋಗಲ್ಲ ಪಾಲಿಕೆ ಜೆಸಿಬಿ ಎಂದು ಪಾಲಿಕೆ ನಡೆ ನೋಡಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ನಾಲ್ಕು ದಿನ ಸದ್ದು ಮಾಡಿ ಐದನೇ ದಿನಕ್ಕೆ ಸೈಲೆಂಟಾದ ಪಾಲಿಕೆ ಬುಲ್ಡೋಜರ್ ಗಳು. ಒತ್ತುವರಿದಾರರಿಗೆ ಬಿಸಿ ಮುಟ್ಟಿಸಬೇಕಿದ್ದ ಪಾಲಿಕೆ, ಬಡವರ ಮನೆ ನೆಲಸಮ ಮಾಡಿ, ಶ್ರೀಮಂತರ ಮನೆ ಕಾಂಪೌಂಡ್, ಗೇಟ್, ಸಜ್ಜೆ ಕೆಡವಿದ್ದಾಯ್ತು, ಸಂಪೂರ್ಣ ಜಾಗವನ್ನು ಯಾವಾಗ ತೆರವು ಮಾಡ್ತಾರೆ ಅನ್ನೋದು ಮುಂದಿರುವ ಪ್ರಶ್ನೆಯಾಗಿದೆ.
ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು