Thursday, January 23, 2025

ರಾಷ್ಟ್ರೀಯ ಉದ್ಯಾನವನದಲ್ಲಿ ರಾಣಾ ದರ್ಬಾರ್

ಮೈಸೂರು : ಎಸ್. ಬಂಡೀಪುರ ರಾಷ್ಟ್ರೀಯ ಉದ್ಯಾನವನ ಎರಡು ರಾಜ್ಯಗಳ ಗಡಿ ಹಂಚಿಕೊಂಡ ಅರಣ್ಯ ಪ್ರದೇಶ. ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಹೆಗ್ಗಳಿಕೆ ಈ ಅರಣ್ಯ ಪ್ರದೇಶಕ್ಕಿದೆ. ಇದೇ ಕಾರಣಕ್ಕೆ ಬಂಡೀಪುರವನ್ನು ಹುಳಿ ಸಂರಕ್ಷಿತ ಅರಣ್ಯ ಪ್ರದೇಶವಾಗಿ ಸರ್ಕಾರ ಘೋಷಣೆ ಮಾಡಿದೆ. ಇದು ಸಂರಕ್ಷಿತ ಅರಣ್ಯ ಆದ ಕಾರಣಕ್ಕೆ ಇಲ್ಲಿ ಜನಸಾಮನ್ಯರ ಸಂಚಾರಕ್ಕೆ ನಿರ್ಬಂಧಗಳನ್ನು ಹಾಕಲಾಗಿದೆಯಾದರೂ ಮಾಜಿ ಸಚಿವ ಕೆ.ಜೆ.ಜಾರ್ಜ್ ಪುತ್ರನಿಗೆ ಮಾತ್ರ ಇದು ಅನ್ವಯ ಆಗುತ್ತಿಲ್ಲ.ವನ್ಯಜೀವಿ ಧಾಮದ ರಸ್ತೆಯನ್ನೇ ಮಾಜಿ ಸಚಿವರ ಪುತ್ರ ರಾಣಾ ಜಾರ್ಜ್ ರಹದಾರಿ ಮಾಡಿಕೊಂಡಿದ್ದಾರೆ.ತನ್ನ ಜಮೀನಿಗೆ ಹೋಗಲು ಸಂರಕ್ಷಿತ ಅರಣ್ಯ ಪ್ರದೇಶ ಬಳಸುತ್ತಿರುವ ಮಾಜಿ ಸಚಿವರ ಪುತ್ರ, ಎರಡೆರಡು ಬಾರಿ ನೋಟಿಸ್ ನೀಡಿದ್ದರೂ ಕ್ಯಾರೆ ಎನ್ನುತ್ತಿಲ್ಲ. ಕಾಂಗ್ರೆಸ್ ಮುಖಂಡ ಕೆ.ಜೆ.ಜಾರ್ಜ್ ಪುತ್ರ ರಾಣಾ ಜಾರ್ಜ್ ಮಾತ್ರ ಅರಣ್ಯ ದಾರಿ ಬಳಸುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು ಜಿಲ್ಲೆ ಸರಗೂರು ತಾಲೂಕು ಲಕ್ಕಸೋಗೆ ಗ್ರಾಮದಲ್ಲಿ ರಾಣಾ ಜಮೀನು ಹೊಂದಿದ್ದಾರೆ. ಇದು ನುಗು ಜಲಾಶಯದ ಹಿನ್ನೀರಿನ ದಂಡೆಯಲ್ಲಿನ ಸರ್ವೆ ನಂ 33ರಲ್ಲಿರುವ ಜಮೀನಾಗಿದೆ.ಆದರೆ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಪರಿಸರ ಸೂಕ್ಷ್ಮ ವಲಯ. ವನ್ಯಜೀವಿ ಕಾಯ್ದೆ 1972ರ ಪ್ರಕಾರ ಅರಣ್ಯಕ್ಕೆ ಜನ-ಜಾನುವಾರು ಪ್ರವೇಶ ನಿಷಿದ್ಧ ಮಾಡಲಾಗಿದೆ. ಆದರೆ, ದಶಕಗಳಿಂದ ತೋಟದ ಕೆಲಸಗಾರರು ಹಾಗೂ ಮಾಲೀಕರ ವಾಹನಗಳ ಓಡಾಟ ಅರಣ್ಯದಲ್ಲೇ ನಡೆಯುತ್ತಿದ್ದು, 2020ರ ಆಗಸ್ಟ್ 8 ಮತ್ತು 2022ರ ಆಗಸ್ಟ್ 20ರಂದು ರಾಣಾಗೆ ಅರಣ್ಯ ಇಲಾಖೆ ನೋಟಿಸ್ ನೀಡಿ ದಾಖಲೆ ಕೇಳಿದೆ. ಆದರೆ,ಇಲಾಖೆ ನೋಟಿಸ್‌ಗೆ ರಾಣಾ ಸಮರ್ಪಕ ಉತ್ತರ ನೀಡುತ್ತಿಲ್ಲ.

1972ರ ಕಾಯ್ದೆಯನ್ವಯ ಅರಣ್ಯ ವ್ಯಾಪ್ತಿಯಲ್ಲಿ ಹಸ್ತಾಂತರಿಸಲಾಗದ ಆಸ್ತಿ ಇದ್ದರೆ, ಸೆಕ್ಷನ್ 28ರ ಪ್ರಕಾರ ಅರಣ್ಯದ ಮೂಲಕ ಖಾಸಗಿ ಭೂಮಿಗೆ ತೆರಳಬಹುದು ಎಂದು ರಾಣಾ ಉತ್ತರ ನೀಡಿದ್ದು, ಮೇಲಾಧಿಕಾರಿಗಳ ಅನುಮತಿ ಇಲ್ಲ ಎಂದು ಮತ್ತೆ ನೋಟಿಸ್ ನೀಡಿದರೆ ಯಾವುದೇ ಉತ್ತರ ನೀಡಿಲ್ಲ.

ಒಟ್ಟಾರೆ, ಕೇವಲ ನೋಟಿಸ್ ನೀಡಿ ಸುಮ್ಮನಾದ ಅಧಿಕಾರಿಗಳ ನಡೆ ಮಾಜಿ ಸಚಿವರ ಮಗನಿಗೆ, ಜನ ಸಾಮಾನ್ಯರಿಗೆ ಪ್ರತ್ಯೇಕ ಕಾನೂನಿದೆ ಎಂಬುದನ್ನು ತೋರಿಸುತ್ತಿದೆ. ಇದಕ್ಕೆ ಸರ್ಕಾರವೇ ಉತ್ತರಿಸಬೇಕಿದೆ.

ಸುರೇಶ್ ಬಿ. ಪವರ್ ಟಿವಿ ಮೈಸೂರು

RELATED ARTICLES

Related Articles

TRENDING ARTICLES