ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಮಾಡುತ್ತಿದ್ದು, ದಸರಾ ಮಹೋತ್ಸವವನ್ನು ರಾಷ್ಟ್ರಪತಿಗಳು ಉದ್ಘಾಟಿಸುತ್ತಿರುವುದು ಇದೇ ಮೊದಲು. ಇದೀಗ ಪ್ರಧಾನಿ ನರೇಂದ್ರ ಮೋದಿ ಕೂಡ ದಸರಾ ಜಂಬೂ ಸವಾರಿಗೆ ಮೈಸೂರಿಗೆ ಆಗಮಿಸುವ ಸುದ್ದಿ ಹಬ್ಬಿತ್ತು.
ಇನ್ನು, ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿರುವ ಸಂಸದ ಪ್ರತಾಪ್ ಸಿಂಹ ಯೋಗ ದಿನಕ್ಕೆ ಬಂದಾಗಲೇ ಮೋದಿ ಅವರು ದಸರಾ ನೋಡುವ ಇಚ್ಚೆ, ಆಸೆ ವ್ಯಕ್ತಪಡಿಸಿದ್ದರು. ಈ ಕಾರಣ ದಸರಾ ಕಾರ್ಯಕ್ರಮ ಬಗ್ಗೆ ತಿಳಿಯಲು ಪ್ರಧಾನಿ ಕಾರ್ಯಾಲಯದಿಂದ ಮುಖ್ಯ ಕಾರ್ಯದರ್ಶಿಗೆ ಫೋನ್ ಕರೆ ಬಂದಿತ್ತು. ಪ್ರಧಾನಿಗಳು ಬರ್ತಾ ಇದ್ದಾರೋ ಇಲ್ಲವೋ ಎಂಬುದು ನಿಖರವಾಗಿ ತಿಳಿದಿಲ್ಲ. ಯೋಗ ದಿನಕ್ಕೆ ಪ್ರಧಾನಿಗಳು ಮೈಸೂರಿಗೆ ಬಂದು ತಾಯಿ ಚಾಮುಂಡಿ ದರ್ಶನ ಮಾಡಿದ್ದರು. ಅಂದು ಮತ್ತೊಮ್ಮೆ ದರ್ಶನಕ್ಕೆ ಬರುವ ಇಚ್ಚೆ ವ್ಯಕ್ತಪಡಿಸಿದ್ದರು.
ದಸರಾ ವೇಳೆ ತಾಯಿ ದರ್ಶನ ಇನ್ನೂ ವಿಶೇಷವಾಗಿದೆ. ಹೀಗಾಗಿ ಪ್ರಧಾನಿ ಕಾರ್ಯಾಲಯದಿಂದ ಮಾಹಿತಿ ಪಡೆಯಲಾಗಿದೆ. ದಸರಾ ಸಿದ್ಧತೆ ಹೇಗಿದೆ, ಪ್ರಧಾನಿಗಳು ದಸರಾಗೆ ಬರುವುದಾದರೆ ಯಾವಾಗ ಬಂದರೆ ಉತ್ತಮ ಎಂಬ ಮಾಹಿತಿ ಪಡೆದಿದ್ದಾರೆ. ರಾಷ್ಟ್ರಪತಿ ಬರುತ್ತಿರುವ ಕಾರಣ ಪ್ರಧಾನಿ ಬರುವ ಬಗ್ಗೆ ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.