ಬೆಂಗಳೂರು : ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್‌ಗೆ ಕೇಂದ್ರ ತನಿಖಾ ಸಂಸ್ಥೆಗಳಿಂದ ಒಂದಲ್ಲ ಒಂದು ರೀತಿ ಬಿಸಿ ಮುಟ್ಟುತ್ತಲೇ ಇದೆ. ಸಿಬಿಐ, ಐಟಿ ದಾಳಿ ಬಳಿಕ ಇದೀಗ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಡಿ.ಕೆ.ಶಿವಕುಮಾರ್‌ಗೆ ಇಡಿ ನೋಟಿಸ್ ನೀಡಿದೆ. ಸೆಪ್ಟೆಂಬರ್ ೧೯ರಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಬರುವಂತೆ ಇಡಿ ನೋಟಿಸ್ ನೀಡಿದೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಕನಕಪುರ ಬಂಡೆಗೆ ಸಂಕಷ್ಟ ಎದುರಾಗೋ ಸಾಧ್ಯತೆ ಇದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಕಳೆದ ಆಗಸ್ಟ್ ೨ ರಂದು ಇಡಿ ಕೋರ್ಟ್ ಬಿಗ್ ರಿಲೀಫ್ ನೀಡಿತ್ತು. ಬಂಡೆ ಸೇರಿ ನಾಲ್ವರು ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ಅವಧಿಯನ್ನ ವಿಸ್ತರಣೆ ಮಾಡಿತ್ತು. ಇದೀಗ ಮತ್ತೆ ಇಡಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕರ ಮೇಲೆ ತನಿಖಾ ಸಂಸ್ಥೆಗಳನ್ನು ಛೂ ಬಿಡುತ್ತಿದೆ ಎಂಬ ಆರೋಪದ ನಡುವೆಯೂ ಶಿವಕುಮಾರ್‌ಗೆ ಮಾತ್ರ ಟೆನ್ಷನ್ ತಪ್ಪುತ್ತಿಲ್ಲ. ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ,ಕಾಂಗ್ರೆಸ್ ಟ್ರಬಲ್ ಶೂಟರ್‌ಗೆ ವಿಚಾರಣೆಗೆ ಬರುವಂತೆ ಇಡಿ ನೋಟಿಸ್ ನೀಡಿದೆ.
ಇಡಿ ನೋಟಿಸ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ಭಾರತ್ ಜೋಡೋ ಹಾಗೂ ಅಧಿವೇಶನ ಸಮಯದಲ್ಲಿ ನನಗೆ ಇಡಿ ಮತ್ತೆ ಸಮನ್ಸ್ ಕೊಟ್ಟಿದೆ. ನಾನು ತನಿಖೆಗೆ ಸಹಕರಿಸಲು ಸಿದ್ಧನಿದ್ದೇನೆ ಎಂದ್ರು. ಮೇಲಿಂದ ಮೇಲೆ ನನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಅಲ್ದೇ ಬಂಡೆ ಬೆನ್ನಿಗೆ ನಿಂತಿರುವ ಕಾಂಗ್ರೆಸ್ ಹೈಕಮಾಂಡ್, ಡಿ.ಕೆ.ಶಿವಕುಮಾರ್ ಅವರನ್ನ ಗುರಿಯಾಗಿಸಲು ಬಿಜೆಪಿ ಚುನಾವಣಾ ವಿಭಾಗವನ್ನ ಕರೆ ತಂದಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಟ್ವೀಟ್ ಮಾಡಿ ವ್ಯಂಗ್ಯ ಮಾಡಿದ್ದಾರೆ.
ಒಟ್ಟಾರೆ, ವಿಧಾನಸಭಾ ಚುನಾವಣೆಯಲ್ಲಿ ಹತ್ತಿರವಾಗುತ್ತಿದ್ದಂತೆ ಇಡಿ ಇಕ್ಕಳದಲ್ಲಿ ಕನಕಪುರ ಬಂಡೆ ಸಿಲುಕುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.
ಗೋವಿಂದ್, ಪೊಲಿಟಿಕಲ್ ಬ್ಯುರೋ,ಪವರ್ ಟವಿ