Monday, December 23, 2024

ಪ್ರಭಾವಿಗಳ ಕಟ್ಟಡ ಮುಟ್ಟದ BBMP ಬುಲ್ಡೋಜರ್​​ಗಳು.!

ಬೆಂಗಳೂರು : ಅಲ್ಲಿ ಮಾರ್ಕಿಂಗ್ ಆಗಿತ್ತು. ರಾಜಕಾಲುವೆ ಇಲ್ಲಿ ಹಾದು ಹೋಗಿದೆ ಅನ್ನೋದನ್ನು ಸರ್ವೆಯರ್ ಗುರುತು ಹಾಕಿ ಹೋಗಿದ್ದೂ ಆಗಿತ್ತು. ಒತ್ತುವರಿ ಪಟ್ಟಿಗೆ ಹೆಸರನ್ನು ಸೇರಿಸಿದ್ದೂ ಆಗಿತ್ತು. ಜೆಸಿಬಿಗಳು ಘರ್ಜಿಸಿಕೊಂಡು ಸ್ಥಳಕ್ಕೂ ಬಂದಿದ್ದಾಗಿತ್ತು. ಆದ್ರೆ, ತೆರವು ಆರಂಭವಾಗ್ತಿದ್ದಂತೆ ಪಾಲಿಕೆ ಅಧಿಕಾರಿಗಳ ಮನಸ್ಸು ಬದಲಾಗಿತ್ತು.

ನಾವ್ ಹೇಳ್ತಿರೋದು ಪ್ರತಿಷ್ಠಿತ ಅರಮನೆಗಳಿರೋ ಇಪ್ಸಿಲಾನ್ ವಿಲ್ಲಾಗಳ ಬಗ್ಗೆ. ಇಪ್ಸಿಲಾನ್ ಪಾಲಿಕೆ ಬಿಡುಗಡೆ ಮಾಡಿರುವ 15 ಮಂದಿ ಪ್ರತಿಷ್ಠಿತರ ಒತ್ತುವರಿ ಪಟ್ಟಿಯಲ್ಲಿತ್ತು. ಹೀಗಾಗಿ ಒತ್ತುವರಿ ತೆರವಿಗೆ ಪಾಲಿಕೆ ಅಧಿಕಾರಿಗಳು ಸ್ಪಾಟ್ಗೂ ಬಂದಿದ್ರು. ರಾಜಕಾಲುವೆ ಹರಿದು ಹೋಗ್ತಿದ್ದಲ್ಲಿದ್ದ ರಾಜಕಾಲುವೆ ತಡೆಗೋಡೆಯನ್ನು ತೆರವು ಗೊಳಿಸೋಕೂ ಆರಂಭಿಸಿದ್ರು. ಆದ್ರೆ, ಆಮೇಲೆ ಆಗಿದ್ದೇ ಬೇರೆ.

ರಿಪಬ್ಲಿಕ್ ಆಫ್ ಇಪ್ಸಿಲಾನ್ನ ಟಚ್ ಮಾಡುವಲ್ಲಿ ಪಾಲಿಕೆ ಎಡವಿಬಿದ್ದಿದೆ. ರಾಜಕಾಲುವೆ ಒತ್ತುವರಿ ತೆರವಿನ ನಾಟಕ ಆರಂಭಿಸಿರುವ ಬಿಬಿಎಂಪಿ ಇಪ್ಸಿಲಾನ್ ಕಡೆ ಮುಖ ಮಾಡಿತ್ತು. ಬಿಬಿಎಂಪಿಯ ಜೆಸಿಬಿಗಳು ಇಪ್ಸಿಲಾನ್ ಮಾಡಿಕೊಂಡಿರುವ ರಾಜಕಾಲುವೆ ಒತ್ತುವರಿ ತೆರವಿಗೆ ಮುಂದಾಗಿದ್ವು. ಆರಂಭದಲ್ಲಿ ಭೂಮಾಲೀಕರು ಬಂದು ಗಲಾಟೆ ಮಾಡಿದ್ರೂ ತಲೆಕೆಡಿಸಿಕೊಳ್ಳದ ಪಾಲಿಕೆ ಅಧಿಕಾರಿಗಳು ಒತ್ತುವರಿ ತೆರವನ್ನು ಆರಂಭಿಸಿದ್ರು. ಆದ್ರೆ, ಅದೇನಾಯ್ತೋ ಏನೋ ಕಾರ್ಯಾಚರಣೆ ಆರಂಭವಾಗಿ ಸ್ಪಲ್ಪ ಹೊತ್ತಲ್ಲೇ ಪಾಲಿಕೆ ಅಧಿಕಾರಿಗಳು ಉಲ್ಟಾ ಹೊಡೆದು ಬಿಟ್ರು. ಇಪ್ಸಿಲಾನ್ ಒಳಗೆ ರಾಜಕಾಲುವೆ ಇರಬೇಕಾದಷ್ಟು ಇದೆ. ಇಪ್ಸಿಲಾನ್ ಒತ್ತುವರಿಯನ್ನೇ ಮಾಡಿಕೊಂದಿಲ್ಲ. ಹೀಗಂತ ಪಾಲಿಕೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಸರ್ಟಿಫಿಕೇಟ್ ನೀಡಿ ಇಡೀ ಒತ್ತುವರಿ ತೆರವನ್ನೇ ನಿಲ್ಲಿಸಿಬಿಟ್ರು.

ಇನ್ನೊಂದ್ಕಡೆ ಇಪ್ಸಿಲಾನ್ ಒಳಗೆ ಕೆರೆಯಿಂದ ಕೆರೆಗೆ ಸಂಪರ್ಕ ಕಲ್ಪಿಸುವ ಗಾಲುವೆಯೂ ಹರಿದು ಹೋಗಿತ್ತು. ಇದನ್ನೂ ಸಹ ಸರ್ವೇ ಅಧಿಕಾರಿಗಳು ಬಂದು ಮಾರ್ಕಿಂಗ್ ಮಾಡಿದ್ರು. ಆದ್ರೆ, ಅದು ಅಸ್ಥಿತ್ವದಲ್ಲಿಲ್ಲದೇ ಇರೋ ಕಾರಣ ಅದನ್ನು ತೆರವು ಮಾಡೋದಿಲ್ಲವೆಂದು ಪಾಲಿಕೆ ಅಧಿಕಾರಿಗಳು ಬಿಟ್ಟು ನಡೆದ್ರು. ಪಾಲಿಕೆ ಅಧಿಕಾರಿಗಳ ಈ ಡ್ರಾಮಾ ಹತ್ತು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಇನ್ನೊಂದ್ಕಡೆ ನಲ್ಪಾಡ್ ಅಕಾಡೆಮಿಯಲ್ಲಿ ಎರಡು ದಿನ ನಡೆದಿದ್ದ ಒತ್ತುವರಿ ತೆರವು ಗುರುವಾರ ಸಂಪೂರ್ಣ ನಿಂತೇ ಹೋಗಿತ್ತು. ಅತ್ತ ಮುನೇಕೊಳಲು, ಶಾಂತಿನಿಕೇತನ ಲೇಔಟ್ನಲ್ಲೂ ಒತ್ತುವರಿ ತೆರವಿಗೆ ಅಧಿಕಾರಿಗಳು ಮುಂದಾಗ್ಲೇ ಇಲ್ಲ. ಇನ್ನು ಬುಧವಾರ ಬಾಗ್ಮನೆಯಲ್ಲಿ ಸರ್ವೆ ಮಾಡಿದ್ದ ಅಧಿಕಾರಿಗಳು ಅತ್ತ ಸುಳಿಯಲೇ ಇಲ್ಲ.

ಒಟ್ಟಿನಲ್ಲಿ ಪಾಲಿಕೆಯ ರಾಜಕಾಲುವೆ ಒತ್ತುವರಿ ನಾಟಕ ನಿರೀಕ್ಷೆಯಂತೇ ಆರಂಭಿಕ ಶೂರತ್ವಕ್ಕೆ ಸೀಮಿತವಾಗಿದೆ. ಬಡಬಗ್ಗರ ಮನೆಯನ್ನು ನಿರ್ದಾಕ್ಷಿಣ್ಯವಾಗಿ ಒಡೆದ ಪಾಲಿಕೆ ಅಧಿಕಾರಿಗಳು ಸದ್ಯ ಪ್ರತಿಷ್ಠಿತರನ್ನು ಬಚಾವ್ ಮಾಡೋ ಕೆಲ್ಸ ಮಾಡ್ತಿರೋದು ನಿಜಕ್ಕೂ ವಿಪರ್ಯಾಸ.

ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES