ಬೆಂಗಳೂರು: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಲೋಕಾಯುಕ್ತಕ್ಕೆ ಕೋರ್ಟ್ ಆದೇಶ ನೀಡಿದ ಹಿನ್ನಲೆ ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಯತ್ನಾಳ್ ಮಾತನಾಡಿದ್ದಾರೆ.
ಬಿಜೆಪಿಯಲ್ಲಿ ಎಷ್ಟೇ ದುಡ್ಡು ಹುಲಿ ಇದ್ದರೂ ಕಾನೂನಿನ ಮುಂದೆ ಎಲ್ಲರೂ ಒಂದೇ, ಈ ಹಿಂದೆ ಎಲ್ ಕೆ ಅಡ್ವಾಣಿ ಮೇಲೆ ಆರೋಪವೊಂದು ಕೇಳಿ ಬಂದಿತ್ತು. ಆ ಸಂದರ್ಭದಲ್ಲಿ ಎಲ್ಲ ಸ್ಥಾನಕ್ಕೆ ಎಲ್ ಕೆ ಅಡ್ವಾಣಿ ರಾಜೀನಾಮೆ ಕೊಟ್ಟಿದ್ದರು ಎಂದು ಪರೋಕ್ಷವಾಗಿ ಯಡಿಯೂರಪ್ಪ ಅವರು ಇತ್ತೀಚಿಗೆ ನೇಮಕವಾದ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದರು.
ಸದ್ಯ ಯಡಿಯೂರಪ್ಪ ಅವರ ವಿರುದ್ಧ ಆರೋಪವೊಂದು ಬಂದಿದೆ. ರಾಜಾಹುಲಿ ಇರಲಿ, ಯಾರೇ ಇರಲಿ ರಾಜೀನಾಮೆ ಕೊಡಲಿ. ಎಲ್ ಕೆ ಅಡ್ವಾಣಿ, ವಾಜಪೇಯಿಗಿಂತ ಡೊಡ್ಡವ್ರಾ ಅವರು, ಎಲ್ಕೆ ಅಡ್ವಾಣಿ ಅವರ ಆದರ್ಶ ಪಾಲಿಸಬೇಕು ಎಂದು ಕೇಂದ್ರೀಯ ಸಂಸದೀಯ ಸ್ಥಾನಕ್ಕೆ ಬಿಎಸ್ವೈ ರಾಜೀನಾಮೆ ನೀಡುವಂತೆ ಯತ್ನಾಳ್ ಆಗ್ರಹ ಮಾಡಿದರು.
ಸಿಎಂ ಆಗಿದ್ದ ವೇಳೆಯಲ್ಲಿ ಬಿ.ಎಸ್ ಯಡಿಯೂರಪ್ಪ ಅವರು ಸೇರಿದಂತೆ ಒಟ್ಟು 9 ಜನರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಸಾಮಾಜಿಕ ಹೋರಾಟಗಾರರು ಒಬ್ಬರು ಪ್ರಕರಣ ದಾಖಲಿಸದ ಹಿನ್ನಲೆಯಲ್ಲಿ ಜಿಲ್ಲಾ ಕೋರ್ಟ್ ಮೋರೆಹೋಗಿದ್ದರು. ಯಡಿಯೂರಪ್ಪ ವಿರುದ್ಧ ಪ್ರಕರಣ ದಾಖಲಿಸುವಂತೆ ಲೋಕಾಯುಕ್ತಕ್ಕೆ ಇತ್ತೀಚೆಗೆ ಜಿಲ್ಲಾ ಕೋರ್ಟ್ ಆದೇಶಿಸಿತ್ತು.