Monday, December 23, 2024

ದಸರಾಗೆ ಚಾಮರಾಜನಗರ ಜಟ್ಟಿ ತಾಲೀಮು

ಚಾಮರಾಜನಗರ : ವಿಶ್ವವಿಖ್ಯಾತ ದಸರಾ ಭಾಗವಾಗಿ ವಿಜಯದಶಮಿ ದಿನ ಮೈಸೂರಿನ ಅಂಬಾ ವಿಲಾಸ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ನಡೆಯಲಿರುವ ಮೈನವಿರೇಳಿಸುವ ವಜ್ರಮುಷ್ಠಿ ಕಾಳಗಕ್ಕೆ ಚಾಮರಾಜನಗರ ಜಟ್ಟಿ, ಉಸ್ತಾದ್ ಕೃಷ್ಣಪ್ಪ ಅವರ ಪುತ್ರ ಅಚ್ಯುತ್ ಜಟ್ಟಿ ಸಜ್ಜುಗೊಳ್ಳುತ್ತಿದ್ದಾರೆ. ಚಾಮರಾಜನಗರದ ದೊಡ್ಡ ಗರಡಿಯಲ್ಲಿ ತರಬೇತುದಾರ ಪುಟ್ಟಣ್ಣ ಜಟ್ಟಿ ಮತ್ತು ಹೇಮಂತ್ ಜಟ್ಟಿ, ತಿರುಮಲೇಶ್ ಜಟ್ಟಿ ಅವರಿಂದ ಅಚ್ಯುತ್ ತರಬೇತಿ ಪಡೆಯುತ್ತಿದ್ದಾರೆ. ಇದನ್ನು ನೋಡಲು ಜನರೇ ದಂಡೇ ಹರಿದು ಬರುತ್ತಿದೆ. ಅಚ್ಯುತ್ ಈ ಹಿಂದೆಯೂ 2008 ರಲ್ಲಿ ಮುಷ್ಠಿ ಕಾಳಗದಲ್ಲಿ ಭಾಗವಹಿಸಿದ್ದರು.

ಬೆಂಗಳೂರು, ಮೈಸೂರು, ಚನ್ನಪಟ್ಟಣ ಮತ್ತು ಚಾಮರಾಜನಗರದ ತಲಾ ಒಬ್ಬೊಬ್ಬ ಜಟ್ಟಿ ಈ ವಜ್ರಮುಷ್ಟಿ ಕಾಳಗದಲ್ಲಿ ಭಾಗವಹಿಸುವುದು ರೂಢಿ. ಜಟ್ಟಿ ಜನಾಂಗದವರೇ ಇದರಲ್ಲಿ ಭಾಗಿಯಾಗಬೇಕು. ನಾಲ್ವರು ಪೈಲ್ವಾನರು ವಜ್ರಮುಷ್ಟಿ ಕಾಳಗ ಮಾಡುತ್ತಾರೆ. ಕೈಯಲ್ಲಿ ದಂತದ ನಖವನ್ನು ಧರಿಸಿ ಮಾಡುವ ಈ ಹೊಡೆದಾಟದಲ್ಲಿ ಯಾರಾದರೂ ಒಬ್ಬ ಜಟ್ಟಿಯ ತಲೆಯಲ್ಲಿ ರಕ್ತ ಸುರಿಯಲು ಆರಂಭವಾದ ತಕ್ಷಣ ಕಾಳಗವನ್ನು ಮುಕ್ತಾಯ ಮಾಡುವುದು ರೂಢಿ.  ಈ ವರ್ಷ ಇಂತಹವರನ್ನು ಜಟ್ಟಿ ಕಾಳಗಕ್ಕೆ ಕಳುಹಿಸುತ್ತೇವೆ ಎಂದು ರಾಜಮನೆತನಕ್ಕೆ ಮೊದಲೇ ತಿಳಿಸಬೇಕು.

ಜಟ್ಟಿಗೆ ವಯಸ್ಸಿನ ಮಿತಿ ಇಲ್ಲ. ಆರೋಗ್ಯದಿಂದ ಇರಬೇಕು.ರಾಜಮನೆತನದ ಅಂಗರಕ್ಷಕರಾಗಿರುವ ಜಟ್ಟಿ ಸಮುದಾಯದ ಶೌರ್ಯ, ತ್ಯಾಗ, ರಾಜರಿಗೆ ಒಳಿತಾಗಲೆಂಬ ಸಂಕೇತ ಈ ಜಟ್ಟಿ ಕಾಳಗವಾಗಿದೆ ಎಂದು ಹೇಳಲಾಗಿದೆ‌.

ಶ್ರೀನಿವಾಸ್ ನಾಯಕ ಪವರ್ ಟಿವಿ ಚಾಮರಾಜನಗರ

RELATED ARTICLES

Related Articles

TRENDING ARTICLES