Wednesday, December 25, 2024

ಇಂಡಿಯನ್ ಸಿನಿದುನಿಯಾಗೆ ಕರುನಾಡೇ ಹೆಡ್ ಆಫೀಸ್

ಫ್ಲೈಟ್ ಹತ್ತಿ ಎಲ್ಲೆಲ್ಲೋ ಹೋಗಿ ಸೈಮಾ ಅವಾರ್ಡ್ಸ್ನ ನಮ್ಮ ಕನ್ನಡಕ್ಕೆ ತರ್ತಿದ್ದ ನಮ್ಮ ಇಂಡಸ್ಟ್ರಿ ಮಂದಿ, ಈ ಬಾರಿ ನಮ್ಮೂರಿನಲ್ಲೇ ರಂಗು ರಂಗಿನ ಕಾರ್ಯಕ್ರಮ ನಡೆಸಿದ್ದಾರೆ. ರೆಡ್ ಕಾರ್ಪೆಟ್ ಹಾಸಿ, ಪರಭಾಷಾ ಸೂಪರ್ ಸ್ಟಾರ್ಸ್​ನ ವೆಲ್ಕಮ್ ಮಾಡಿದ್ದಾರೆ. ಕಮಲ್ ಹಾಸನ್, ರಣ್ವೀರ್ ಸಿಂಗ್, ವಿಜಯ್ ದೇವರಕೊಂಡ, ಅಲ್ಲು ಅರ್ಜುನ್​ರಂತಹ ಸೆನ್ಸೇಷನಲ್ ಸ್ಟಾರ್ಸ್​ ಕನ್ನಡ ನೆಲಕ್ಕೆ ಕಾಲಿಟ್ಟಿದ್ದಾರೆ. ಕನ್ನಡಿಗರ ಗತ್ತು, ತಾಕತ್ತನ್ನ ಭಾರತೀಯ ಚಿತ್ರರಂಗಕ್ಕೆ ಸಾರಿದ ರಾಕಿಭಾಯ್ ಕನಸು ನನಸಾಗಿದೆ. ಈ ಬಗ್ಗೆ ಯಶ್ ಏನು ಹೇಳಿದ್ರು. ಕಲರ್​ಫುಲ್ ಕಾರ್ಯಕ್ರಮ ಹೇಗಿತ್ತು ಅಂತೀರಾ..? ನೀವೇ ಓದಿ.

  • ಕಂಡ ಕನಸು ನನಸು ಮಾಡಿದ ರಾಕಿಭಾಯ್ ಹೇಳಿದ್ದೇನು..?

ಕಥೆಯಲ್ಲಿ ಗಟ್ಟಿತನ, ಪಾತ್ರಗಳಲ್ಲಿ ಗಮ್ಮತ್ತು, ಮೇಕಿಂಗ್​ನಲ್ಲಿ ವಿಶೇಷತೆ ಇದ್ರೆ ಬಾಲಿವುಡ್ ಸಿನಿಮಾಗಳೇ ಅಲ್ಲ, ಬೆಂಗಾಳಿ, ತುಳು ಸಿನಿಮಾಗಳು ಕೂಡ ಪ್ರೇಕ್ಷಕರಿಗೆ ರುಚಿಸುತ್ತವೆ. ಅದಕ್ಕೆ ನಮ್ಮ ಸೌತ್ ಸಿನಿಮಾಗಳೇ ಬೆಸ್ಟ್ ಎಕ್ಸಾಂಪಲ್. ಹೌದು.. ಒಂದು ಕಾಲದಲ್ಲಿ ನಮ್ಮ ಸೌತ್ ಸಿನಿಮಾಗಳನ್ನ, ಅದ್ರಲ್ಲೂ ಕನ್ನಡ ಚಿತ್ರಗಳನ್ನ ಬಹಳ ಕೇವಲವಾಗಿ ನೋಡ್ತಿತ್ತು ಭಾರತೀಯ ಚಿತ್ರರಂಗ. ಆದ್ರೀಗ ಕಾಲ ಬದಲಾಗಿದೆ. ಸೌತ್​ನ ತೂಕ ಹೆಚ್ಚಿದೆ, ಕನ್ನಡದ ಭಾವುಟ ಬಾಲಿವುಡ್​ ಶಿಖರದ ಮೇಲೆ ಜೋರಾಗಿ ಹಾರಾಡ್ತಿದೆ.

ಯೆಸ್.. ಕನ್ನಡ ಇಂಡಸ್ಟ್ರಿಗೆ ಒಂದು ಹೊಸ ಇಮೇಜ್ ತಂದುಕೊಟ್ರು ರಾಕಿಭಾಯ್ ಯಶ್. ಅದೂ ಕೆಜಿಎಫ್ ಅನ್ನೋ ಮಾಸ್ಟರ್​ಪೀಸ್​ನಿಂದ ಅನ್ನೋದು ವಿಶೇಷ. ಒಂದ್ಕಡೆ ರಾಜಮೌಳಿ, ಶಂಕರ್, ಮತ್ತೊಂದ್ಕಡೆ ಪ್ರಶಾಂತ್ ನೀಲ್. ಇವ್ರ ಮೇಕಿಂಗ್ ಪ್ಯಾಟ್ರನ್, ಸೌತ್ ಸ್ಟಾರ್​ಗಳ ಹಾರ್ಡ್​ ವರ್ಕ್​, ಡೆಡಿಕೇಷನ್ ಬಾಲಿವುಡ್ ಥಂಡಾ ಹೊಡೆಯುವಂತೆ ಮಾಡಿತು.

ಪರಭಾಷಾ ಸೂಪರ್ ಸ್ಟಾರ್ಸ್​ ಎಲ್ಲಾ ನಮ್ಮ ಕನ್ನಡ ಟೆಕ್ನಿಷಿಯನ್ಸ್ ಜೊತೆ ಕೆಲಸ ಮಾಡೋಕೆ ಮುಗಿ ಬೀಳ್ತಿದ್ದಾರೆ. ಅದ್ರಲ್ಲೂ ಯಶ್ ಅವ್ರ ಸ್ವ್ಯಾಗ್, ಸ್ಟೈಲು, ಮ್ಯಾನರಿಸಂಗೆ ಬಿಟೌನ್ ಟಾಪ್ ಸ್ಟಾರ್ಸ್​ ಎಲ್ಲಾ ಕ್ಲೀನ್ ಬೋಲ್ಡ್ ಆಗಿಬಿಟ್ಟಿದ್ದಾರೆ. ಅವ್ರು ಕೂಡ ಯಶ್​ ಸ್ಟೈಲ್​ನ ಫಾಲೋ ಮಾಡೋ ಹಾಗಾಗಿದೆ. ಇದು ಪ್ರತಿಯೊಬ್ಬ ಕನ್ನಡಿಗ ಹೆಮ್ಮೆ ಪಡೋ ವಿಷಯ.

ಒಂದ್ಕಡೆ ಕನ್ನಡ ಇಂಡಸ್ಟ್ರಿಯನ್ನ ಕಡೆಗಣಿಸಲಾಗ್ತಿದೆ ಅಂತ ನಿರ್ಮಾಪಕರುಗಳು ತುರ್ತು ಸುದ್ದಿಗೋಷ್ಠಿ ನಡೆಸಿದ್ರೆ, ಮತ್ತೊಂದ್ಕಡೆ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​ ಹೆಸ್ರಲ್ಲಿ ಸೈಮಾ 10ನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ನಮ್ಮ ಬೆಂಗಳೂರಲ್ಲಿ ನಡೆದಿದೆ. ನಮ್ಮವ್ರೆಲ್ಲಾ ಇಷ್ಟು ವರ್ಷ ಬೇರೆ ಬೇರೆ ಕಡೆ ಹೋಗಿ ಪ್ರಶಸ್ತಿ ಪಡೆದು ಬರ್ತಿದ್ರು. ಆದ್ರೀಗ ಪರಭಾಷಾ ಸ್ಟಾರ್ಸ್​ ಎಲ್ಲಾ ನಮ್ಮೂರಿಗೇ ಫ್ಲೈಟ್ ಹತ್ತಿ ಬಂದು ಅವಿಸ್ಮರಣೀಯ ನೆನಪಿನ ಬುತ್ತಿಗಳನ್ನು ಬಿಚ್ಚಿಟ್ಟಿದ್ದಾರೆ.

ಅಂದಹಾಗೆ ಇದೆಲ್ಲಕ್ಕೂ ಕಾರಣ ನಮ್ಮ ರಾಕಿಭಾಯ್ ಯಶ್ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಅದನ್ನ ಖುದ್ದು ಈ ಬಾರಿ ಕಾರ್ಯಕ್ರಮ ಹೋಸ್ಟ್ ಮಾಡಿದಂತಹ ಅಕುಲ್ ಬಾಲಾಜಿ ಅವ್ರೇ ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಜೊತೆ ಸೈಮಾಗೆ ತೂಫಾನ್​ನಂತೆ ಬಂದ ರಾಕಿಭಾಯ್ ಯಶ್ ಕೂಡ ಹೆಮ್ಮೆಯಿಂದ ಎಲ್ರೂ ಬರ್ತಾರೆ ಇನ್ಮೇಲೆ ಅಂತ ಗತ್ತಿನಿಂದ ಹೇಳಿದ್ದಾರೆ.

  • ಅಪ್ಪು ಬೆಸ್ಟ್ ಆ್ಯಕ್ಟರ್ ​.. ಮಗುವಂತೆ ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ..!
  • ದೊಡ್ಮನೆ ದೊರೆಗೆ ಕಮಲ್ ಹಾಸನ್ & ಯಶ್ ಸಮಾಧಾನ

ಯುವರತ್ನ ಚಿತ್ರದ ನಟನೆಗಾಗಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವ್ರಿಗೆ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ನೀಡಲಾಯ್ತು. ಆದ್ರೆ ಅಪ್ಪು ಇಲ್ಲದ ಆ ವೇದಿಕೆ ನಿಜಕ್ಕೂ ವೇದಿಕೆ ಅನಿಸಿಕೊಳ್ಳಲಿಲ್ಲ. ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್ ಮುದ್ದಿನ ತಮ್ಮನ ಅಗಲಿಕೆ ನೆನೆದು ಮಗುವಂತೆ ಬಿಕ್ಕಿ ಬಿಕ್ಕಿ ಅತ್ತರು. ಕೂಡಲೇ ವೇದಿಕೆಯಲ್ಲಿ ಪಕ್ಕದಲ್ಲೇ ಇದ್ದ ಕಮಲ್ ಹಾಸನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಇಬ್ಬರೂ ಶಿವಣ್ಣ ಅವ್ರನ್ನ ಸಮಾಧಾನ ಪಡಿಸೋ ಕಾರ್ಯ ಮಾಡಿದ್ದು ಎಮೋಷನಲ್ ಅನಿಸಿತು.

ಇನ್ನು ಬಾಲಿವುಡ್​ನ ರಣ್​ವೀರ್ ಸಿಂಗ್, ತೆಲುಗಿನ ರೌಡಿ ವಿಜಯ್ ದೇವರಕೊಂಡ, ಪುಷ್ಪ ಅಲ್ಲು ಅರ್ಜುನ್, ಪೂಜಾ ಹೆಗ್ಡೆ ಸೇರಿದಂತೆ ಸಾಕಷ್ಟು ತಾರೆಯರು ಕಾರ್ಯಕ್ರಮಕ್ಕೆ ಮೆರುಗು ನೀಡಿದ್ರು. ರಣ್​ವೀರ್ ಸಿಂಗ್, ವಿಜಯ್ ದೇವರಕೊಂಡ ಜೊತೆ ಶಿವಣ್ಣ ಹೆಜ್ಜೆ ಹಾಕಿದ ಪರಿ ಶಿಳ್ಳೆ- ಚಪ್ಪಾಳೆ ತರಿಸಿತು. ನೆರೆದಿದ್ದ ಎಲ್ಲರನ್ನ ಥ್ರಿಲ್ ಆಗಿಸಿತು.

ಯಶ್ ಮುಂದಿನ ಸಿನಿಮಾ ಅಂದ್ರೆ 19ನೇ ವೆಂಚರ್​ಗೆ ಪೂಜಾ ಹೆಗ್ಡೆನೇ ನಾಯಕಿ ಎನ್ನಲಾಗ್ತಿತ್ತು. ಅಲ್ಲದೆ ಯಶ್- ಪೂಜಾ ಮಾತನಾಡೋ ವಿಡಿಯೋ ಕಂಡು ಮುಂದಿನ ಚಿತ್ರದ ನಾಯಕಿ ಜೊತೆ ದಿಲ್​ ಕಿ ಬಾತ್ ಅಂತ ರಾಕಿಭಾಯ್ ಫ್ಯಾನ್ಸ್ ದಿಲ್​ಖುಷ್ ಆಗ್ತಿದ್ದಾರೆ. ಇನ್ನು ಪುಷ್ಪ-2 ಚಿತ್ರ ಕಿಕ್​​ಸ್ಟಾರ್ಟ್​ ಆಗಿದ್ದು, ಅದ್ರ ಕ್ಯಾಪ್ಟನ್ ಸುಕುಮಾರ್ ನಮ್ಮ ಡಾಲಿ ಧನಂಜಯ ಜೊತೆ ಮಾತನಾಡ್ತಿರೋ ಸ್ಟಿಲ್ ಫೋಟೋ ಕೂಡ ಬೇಗ ಸೆಟ್​ಗೆ ಬಂದ್ಬಿಡಿ ಡಾಲಿ ಅನ್ನುವಂತಿದೆ.

ವಿಕ್ರಂ ಚಿತ್ರದ ಬಿಗ್ಗೆಸ್ಟ್ ಸಕ್ಸಸ್​​ನಲ್ಲಿರೋ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್, ವಿಕ್ರಂ ಸ್ವ್ಯಾಗ್​ನಲ್ಲೇ ಸಿಲಿಕಾನ್ ಸಿಟಿಯಲ್ಲಿ ಎಲ್ಲರ ಹುಬ್ಬೇರಿಸಿದ್ರು. ನಟಿ ಮಾಲಾಶ್ರೀ ಮಗಳೊಂದಿಗೆ ಕಾರ್ಯಕ್ರಮದಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆದ್ರು. ಸುಮಲತಾ ಅಂಬರೀಶ್, ಹನ್ಸಿಕಾ ಮೋಟ್ವಾನಿ, ಆಶಿಕಾ, ಚಿಕ್ಕಣ್ಣ, ಶ್ರೀಲೀಲಾ, ಅರ್ಜುನ್​ ಜನ್ಯಾ, ಪ್ರಮೋದ್ ಶೆಟ್ಟಿ, ತರುಣ್ ಸುಧೀರ್ ಹೀಗೆ ಸಾಕಷ್ಟು ಮಂದಿ ತಾರೆಯರು ಭಾಗಿಯಾಗಿದ್ರು.

ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ ಇಂಡಸ್ಟ್ರಿಯ ಅತ್ಯುತ್ತಮ ಚಿತ್ರಗಳಿಗೆ, ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಪ್ರಶಸ್ತಿಗಳನ್ನ ನೀಡಲಾಯ್ತು. ಅದೇನೇ ಇರಲಿ, ಎಲ್ಲೋ ನಡೆಯೋ ಜಾತ್ರೆಗೆ ಹೋಗಿ ಎಂಜಾಯ್ ಮಾಡ್ತಿದ್ದ ನಮಗೆ, ಇಲ್ಲೇ ಜಾತ್ರೆ ನಡೆಸಿ, ಎಲ್ಲರನ್ನ ಇಲ್ಲಿಗೇ ಬರುವಂತೆ ಮಾಡಿದ್ದು ಮಾತ್ರ ಅವಿಸ್ಮರಣೀಯ. ಈ ರೀತಿಯ ಉತ್ಸವಗಳು, ಸಂಭ್ರಮಗಳು ಮತ್ತೆ ಮತ್ತೆ ನಮ್ಮ ಕನ್ನಡ ನೆಲದಲ್ಲಿ ಮರುಕಳಿಸುವಂತಾಗಲಿ. ಅಂತಹ ಕಾರ್ಯಕ್ರಮಗಳಿಗೆ ನಮ್ಮ ಸ್ಯಾಂಡಲ್​ವುಡ್ ಹೆಡ್ ಆಫೀಸ್ ಆಗಲಿ ಅನ್ನೋದೇ ನಮ್ಮ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES