ಹಾಸನ : ನಾರಾಯಣಪುರ ಗ್ರಾಮದಲ್ಲಿ ಬಟ್ಟೆಯ ಜೊತೆಯಲ್ಲಿ ಮಹಿಳೆಯ ಅಸ್ತಿಪಂಜರ ಪತ್ತೆಯಾಗಿದ್ದು, ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ ಸೈನಿಕನ ತಾಯಿಯ ಅಸ್ತಿ ಪಂಜರ ಎಂದು ಗುರುತಿಸಲಾಗಿದೆ.
ಜುಲೈ 20ರಿಂದ ಸೈನಿಕ ರಾಕೇಶ್ನ ತಾಯಿ ರತ್ನಮ್ಮ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ರು, ಆದ್ರೆ ಇದೀಗ ಈಕೆಯ ಅಸ್ತಿ ಪಂಜರ ಪತ್ತೆಯಾಗಿದ್ದು, ಬಟ್ಟೆ ಜೊತೆಯಲ್ಲಿ ಅಸ್ತಿ ಪಂಜರವಿದೆ. ಮಹಿಳೆ ಕಾಣೆಯಾಗಿದ್ದರ ಬಗ್ಗೆ ಈಕೆಯ ಪುತ್ರಿಯರು ಶಾಂತಿಗ್ರಾಮ ಪೊಲೀಸ್ ಠಾಣೆಗೆ ದೂರು ನೀಡಿದ್ರು. ಎಷ್ಟೇ ಹುಡುಕಾಟ ನಡೆಸಿದರು ರತ್ನಮ್ಮನ ಬಗ್ಗೆ ಮಾಹಿತಿ ದೊರಕಿರಲಿಲ್ಲ.
ಇನ್ನು, ನಿನ್ನೆ ಸಂಜೆ ಜೋಳದ ಹೊಲದಲ್ಲಿ ರತ್ನಮ್ಮ ಉಟ್ಟಿದ್ದ ಸೀರೆ ಜೊತೆ ಮನುಷ್ಯನ ತಲೆ ಬುರುಡೆ, ಮೂಳೆಗಳು ಪತ್ತೆಯಾಗಿದೆ. ಇದೀಗ ಈ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಗುಡುಗನಹಳ್ಳಿ ಗ್ರಾಮದ ಮಹೇಶ್ ಎಂಬುವವರ ವಿರುದ್ಧ ಕುಟುಂಬಸ್ಥರು ಕೊಲೆ ಆರೋಪ ಮಾಡ್ತಿದ್ದು, ಚಿನ್ನದ ಸರದ ಆಸೆಗೆ ರತ್ನಮ್ಮನನ್ನು ಮಹೇಶ್ ಕೊಲೆ ಮಾಡಿ ಮೃತದೇಹವನ್ನು ಜೋಳದ ಹೊಲದಲ್ಲಿ ಬಿಸಾಡಿದ್ದಾನೆಂದು ಆರೋಪಿಸ್ತಿದ್ದಾರೆ.
ಅದಲ್ಲದೇ, ಜೋಳದ ತೆನೆ ಕಟಾವಿಗೆ ಹೋದಾಗ ಹೊಲದಲ್ಲಿ ಅಸ್ತಿ ಪಂಜರ ಪತ್ತೆಯಾಗಿದೆ. ಸ್ಥಳಕ್ಕೆ DySP ಉದಯ್ ಭಾಸ್ಕರ್ ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.