ಬೆಂಗಳೂರು : ಮಹದೇವಪುರ ವಿಧಾನಸಭಾ ಕ್ಷೇತ್ರ ಪ್ರವಾಹಕ್ಕೆ ನಲುಗಿತ್ತು. ಅಕ್ಷರಶ: ಜಲತಾಂಡವವೇ ಸೃಷ್ಟಿಯಾಗಿತ್ತು. ಇದಕ್ಕೆಲ್ಲಾ ಏನ್ ಕಾರಣ ಅಂತ ಹುಡ್ಕಿದಾಗ, ಒನ್ ಆ್ಯಂಡ್ ಓನ್ಲಿ ರೀಸನ್ ರಾಜಕಾಲುವೆಗಳ ಒತ್ತುವರಿ. ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಅಪಾರ್ಟ್ಮೆಂಟ್, ಮನೆಗಳನ್ನು ಕಟ್ಟಿಸಿಕೊಂಡಿದ್ದ ಜಾಗಗಳಿಗೆ ಇದೀಗ ಬೊಮ್ಮಾಯಿ ಸರ್ಕಾರ ಬುಲ್ಡೋಜರ್ ನುಗ್ಗಿಸಿದೆ.
ಮಹದೇವಪುರ ಕ್ಷೇತ್ರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಿದೆ. ಅಕ್ರಮವಾಗಿ ಸರ್ಕಾರದ ಜಾಗವನ್ನು ಕಬಳಿಸಿದ ಮನೆಗಳಿಗೆ ಬುಲ್ಡೋಜರ್ ನುಗ್ಗಿಸಿ, ಕಾಂಪೌಂಡ್, ಗೋಡೆ ನೆಲಸಮ ಮಾಡ್ತಿದ್ದಾರೆ. ಚಿನ್ನಪ್ಪನಹಳ್ಳಿಯಿಂದ ಮುನ್ನೇಕೊಳಲು ತನಕ 25ಕ್ಕೂ ಹೆಚ್ಚು ಮನೆಗಳು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿತ್ತು. ಈ ಪ್ರದೇಶಗಳಲ್ಲೆಲ್ಲಾ ತೆರವು ಕಾರ್ಯಾಚರಣೆ ನಡೆದಿದೆ. 5 ಅಡಿಯ ಬೃಹತ್ ರಾಜಕಾಲುವೆಯ ಮೇಲೆ ಮೆಡಿಕಲ್, ಶಾಪಿಂಗ್ ಕಾಂಪ್ಲೆಕ್ಸ್, ಮನೆಗಳು ನಿರ್ಮಾಣವಾಗಿದ್ದವು. ಅವುಗಳನ್ನು ಕೆಡವಿ ಪಾಲಿಕೆಯ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಇನ್ನೂ ಈ ವೇಳೆ ಕೆಲ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದ್ದು, ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿಲ್ಲ. ಹಾಗಾದ್ರೆ ದೊಡ್ಡವರನ್ನು ಉಳಿಸಲು ಹೋಗಿ, ನಮ್ಮನ್ನು ಬಲಿಪಶು ಮಾಡ್ತಿದ್ದಾರೆ ಅಂತ ಕಿಡಿ ಕಾರಿದ್ರು.
ಇನ್ನೂ ರಾಜಕಾಲುವೆ ಇತ್ತೋ ಇಲ್ವೋ ಅನ್ನೋ ಹಾಗೆ ಮೂಲವನ್ನೇ ಕಾಣಿಸದಂತೆ ಕೆಲವು ಭೂಗಳ್ಳರು ಕಾಲುವೆಯ ಮೂಲವನ್ನೇ ಮಂಗಮಾಯ ಮಾಡಿದ್ದಾರೆ. ಅದೇ ರೀತಿ ಹೂಡಿ ಬಳಿ ಇರುವ ಗೋಪಾಲನ್ ಕಾಲೇಜು ಕೂಡ ನೂರು ಮೀಟರ್‌ಗಿಂತಲೂ ಹೆಚ್ಚು ರಾಜಕಾಲುವೆಯನ್ನು ಒತ್ತುವರಿ ಮಾಡಿದೆ. ಯಾವಾಗ ಬಿಬಿಎಂಪಿ ಅಧಿಕಾರಿಗಳು ಜೆಸಿಬಿ ಸಮೇತ ಕಾಲೇಜ್ ಒಳಗಡೆ ನುಗ್ಗಿತ್ತೋ ಆಗ ಕೂಡಲೇ ಎಚ್ಚೆತ್ತುಕೊಂಡ ಕಾಲೇಜು ಆಡಳಿತ ಮಂಡಳಿ ಒತುವರಿ ತೆರವಿಗೆ ನಾವು ಸಹಕಾರ ನೀಡ್ತೇವೆ. ಆದ್ರೆ, ಅಪಾಟ್೯ ಮೆಂಟ್‌ಗಳನ್ನೂ ಕೂಡ ಒತ್ತುವರಿ ತೆರವು ಮಾಡಿ ಅಂತ ಬೇರೊಬ್ಬರ ಮೇಲೆ ಬೊಟ್ಟು ಮಾಡ್ತಿದ್ದಾರೆ.
ಮುನ್ನೇಕೊಳಲು ಭಾಗದ ಸ್ಪೈಸ್ ಗಾರ್ಡನ್ ಬಳಿ 20 ಬಿಲ್ಡಿಂಗ್‌ಗಳು, ಚಿನ್ನಪ್ಪನಹಳ್ಳಿಯಲ್ಲಿ 5 ಬಿಲ್ಡಿಂಗ್‌ಗಳು, 2ವರೆ ಮೀಟರ್ ನಿಂದ 5 ಮೀಟರ್ ತನಕ ರಾಜಕಾಲುವೆ ಒತ್ತುವರಿಯಾಗಿದೆ. ಒತ್ತುವರಿಯಾದ ಜಾಗದಲ್ಲಿ ಬೃಹತ್ ನೀರುಗಾಲುವೆಯ ಕಾಂಪೌಂಡ್ ಕಟ್ಟಿಕೊಂಡು, ರಾಜಕಾಲುವೆಯನ್ನು ಉಳಿಸಲು ಪಾಲಿಕೆ ಮುಂದಾಗಿದೆ. ಒತ್ತುವರಿಯಾದ ಜಾಗದಲ್ಲಿ ಕೆಲ ಮನೆಯವರು ಜಾಗ ಖಾಲಿ ಮಾಡಿಲ್ಲ. ಅಂಥಾವ್ರಿಗೆ ಕಂದಾಯ ಇಲಾಖೆ ಮತ್ತೆ ನೋಟಿಸ್ ನೀಡಿ, 7 ದಿನಗಳ ಕಾಲ ಅವಕಾಶ ನೀಡಲಿದೆ. ನಂತರ ಮತ್ತೆ ತೆರವು ಕಾರ್ಯಾಚರಣೆ ಶುರುವಾಗಲಿದೆ. ಈ ತೆರವು ಕಾರ್ಯಾಚರಣೆಯ ವೆಚ್ಚವನ್ನು ಪಾಲಿಕೆಯೇ ಆರಂಭದಲ್ಲಿ ಭರಿಸಲಿದ್ದು, ಆ ನಂತರ ಮನೆ ಮಾಲೀಕರಿಂದ ವಸೂಲಿ ಮಾಡಲಾಗುತ್ತೆ.
ಒತ್ತುವರಿಯಾದ ಜಾಗವನ್ನು ಪಾಲಿಕೆಯ ಅಧಿಕಾರಿಗಳು, ಸಂಪೂರ್ಣವಾಗಿ ಕೆಡವದೇ, ಅರ್ಧ ಕೆಡವಿ ಬಿಟ್ಟಿದ್ದಾರೆ. ಅಪಾರ್ಟ್‌ಮೆಂಟ್, ದೊಡ್ಡ ಮನೆಗಳನ್ನು ಬಿಟ್ಟು, ಸಣ್ಣಪುಟ್ಟದವ್ರ ಮನೆಯನ್ನು ಕೆಡವಿದ್ದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ತೆರವು ಕಾರ್ಯಾಚರಣೆ ಸ್ಯಾಂಪಲ್ ಮಾತ್ರ. ದೊಡ್ಡ ದೊಡ್ಡ ಐಟಿಬಿಟಿ ಕಂಪನಿಗಳಿಗೂ ಬುಲ್ಡೋಜರ್ ನುಗ್ಗಿಸುವ ಸಾಹಸ ಮಾಡಬೇಕಿದೆ.
ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು