ಕಲಬುರಗಿ : ಬಿಸಿಲನಾಡು ಕಲಬುರಗಿಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ನೆರೆಯ ಮಹಾರಾಷ್ಟ್ರದ ಡ್ಯಾಂಗಳಿಂದ ನೀರು ರಿಲೀಸ್ ಮಾಡ್ತಿರೋ ಪರಿಣಾಮ, ಸೊನ್ನ ಬ್ಯಾರೇಜ್‌ನಿಂದ ಭೀಮಾ ನದಿಗೆ 1.34 ಲಕ್ಷ ಕ್ಯೂಸೆಕ್ ನೀರನ್ನ ಬಿಡುಗಡೆ ಮಾಡಲಾಗಿದೆ. ಇದರಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಭೀಮಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಗಾಣಗಾಪುರ ಸೇತುವೆಗಳು ಜಲಾವೃತವಾಗಿದೆ. ಚಿಂಚೋಳಿಯಲ್ಲೂ ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ.. ಕೆಳದಂಡೆ ಮುಲ್ಲಾಮಾರಿ, ಚನ್ನಪಟ್ಟಣ ಜಲಾಶಯ ಭರ್ತಿಯಾಗಿದ್ದು, ಮುಲ್ಲಾಮಾರಿಯ ಹಲವು ಗ್ರಾಮಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ.
ಇನ್ನೂ ಮಹಾಮಳೆಯಿಂದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತವಾಗಿದೆ. ಜೋಳ, ತೊಗರಿ, ಉದ್ದು, ಹತ್ತಿ ಸೇರಿದಂತೆ ಅನೇಕ ಬೆಳೆಗಳು ನೀರುಪಾಲಾಗಿದೆ. ಕಷ್ಟಪಟ್ಟು ಬೆಳೆದ ಬೆಳೆ ಕಣ್ಣ ಮುಂದೆಯೇ ಕೊಚ್ಚಿ ಹೋಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗಾಗಿದೆ.
ಜನರು ಪ್ರವಾಹದ ಆತಂಕದಲ್ಲೇ ದಿನದೂಡುತ್ತಿದ್ರೆ.. ಜಲಾವೃತವಾದ ಅಫಜಲಪುರ ತಾಲೂಕಿನ ಗಾಣಗಾಪುರ
ಬ್ರಿಡ್ಜ್ ಮೇಲೆ ಲಾರಿ ಚಾಲಕನ ದುಸ್ಸಾಹಸ ಮೆರೆದಿದ್ದಾನೆ.
ಇನ್ನು, ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ, ಅಮೆರಿಕಾದ ವಾಷಿಂಗ್ಟನ್‌ನಲ್ಲಿದ್ದಾರೆ. ಉದ್ಯಮಿಗಳನ್ನ ಭೇಟಿ ಮಾಡುವಲ್ಲಿ ಮಗ್ನರಾಗಿದ್ದು, ಬೋಟ್‌ನಲ್ಲಿ ಕುಳಿತು ಎಂಜಾಯ್ ಮಾಡ್ತಿದಾರೆ.. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಜಿಲ್ಲಾಧಿಕಾರಿ ಯಶವಂತ ಗುರುಕರ್, ಪ್ರವಾಹ ಪರಿಸ್ಥಿತಿ ಎದುರಾದರೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ ಅಂತಾ ಹೇಳಿದ್ರು.
ಮಹಾಮಳೆಯಿಂದ ತೊಗರಿಯ ಕಣಜ ಅಕ್ಷರಶಃ ತತ್ತರಿಸಿ ಹೋಗಿದೆ. ಒಂದು ಕಡೆ ಮನೆ ಮಠಗಳನ್ನ ಕಳೆದುಕೊಂಡು ಜನ ಬೀದಿಗೆ ಬೀಳುತ್ತಿದ್ದರೆ, ಮತ್ತೊಂದೆಡೆ ಬೆಳೆದ ಬೆಳೆಗಳು ಮಳೆಗೆ ಆಹುತಿಯಾಗಿ ಅನ್ನದಾತರು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ.
ಅನಿಲ್‌ಸ್ವಾಮಿ, ಪವರ್ ಟಿವಿ, ಕಲಬುರಗಿ