ವಿಜಯಪುರ: ರಾಜ್ಯದ ಇಮೇಜ್ ದೇಶ ಮಟ್ಟದಲ್ಲಿ ಸಂಪೂರ್ಣ ಹಾಳಾಗಿದೆ. ಜನರು ಈ ಸರ್ಕಾರ ಬೇಗ ಕಿತ್ತು ಹಾಕಿದಷ್ಟು ರಾಜ್ಜಕ್ಕೆ ಒಳ್ಳೆಯದು ಎಂದು ಬಿಜೆಪಿ ಸರ್ಕಾರದ ವಿರುದ್ಧ ಎಂ ಬಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ಇಂದು ಸದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂಬಿಪಿ, ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಒಳ್ಳೆಯ ಸರ್ಕಾರ ಬರಬೇಕು. ಇವರು ಮಾಡಿದ ಡ್ಯಾಮೇಜ್ ಕಂಟ್ರೋಲ್ ಮಾಡಬೇಕಿದೆ. ಬಿಜೆಪಿ ರಾಜ್ಯದ ವ್ಯವಸ್ಥೆಯನ್ನ ಹಾಳು ಮಾಡಿ ಬಿಟ್ಟಿದ್ದಾರೆ. ಈ ವ್ಯವಸ್ಥೆ ಸರಿಪಡೆಸೋದಕ್ಕೆ ಮತ್ತೆ ಎರಡು ವರ್ಷ ಬೇಕಾಗುತ್ತದೆ. ಆರ್ಥಿಕ ಪರಿಸ್ಥಿತಿ ಹದಗೆಡಿಸಿ ಬಿಟ್ಟಿದ್ದಾರೆ ಎಂದರು.
ಕರ್ನಾಟಕ ದೇಶದ ಅಭಿವೃದ್ಧಿ ವ್ಯವಸ್ಥೆಯಲ್ಲಿ ಮತ್ತೆ ನಂಬರ್ 1 ಅಥವಾ 2 ರಾಜ್ಯ ಆಗಬೇಕು. ಸಿದ್ದರಾಮಯ್ಯ ಕಾಲದ ಸರ್ಕಾರದ ಗತವೈಭವ ಮರಳಬೇಕಿದೆ. ನಮಗೆ ಭವ್ಯ, ವೈಭವದ ಇತಿಹಾಸ ಇದೆ, ಅದು ಮರಳಬೇಕು. 40 ಕಮಿಷನ್ ಸರ್ಕಾರ ತೊಲಗಬೇಕು. ಪಿಎಸ್ಐ ಹಗರಣದಲ್ಲಿ ಅಷ್ಟೆ ಅಲ್ಲ, ಬಿಜೆಪಿ ಸರ್ಕಾರದ ಬೇರೆ ಬೇರೆ ಹಗರಣ ಈಗ ಒಂದೊಂದೆ ಹೊರ ಬರುತ್ತಿವೆ ಎಂದು ತಿಳಿಸಿದರು.
ಇನ್ನು ದೊಡ್ಡಬಳ್ಳಾಪುರದ ಬಿಜೆಪಿ ಜನಸ್ಪಂದನೆ ಸಮಾವೇಶದ ಬಗ್ಗೆ ಮಾತನಾಡಿದ ಎಂಬಿಪಿ, ಈ ಸಮಾವೇಶದಲ್ಲಿ ಲಕ್ಷಾಂತರ ಜನ ಎಂದು ಖಾಲಿ ಕುರ್ಚಿಗಳಿಗೆ ಅಡ್ರೆಸ್ ಮಾಡಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ, ಬಿ.ಎಸ್ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡುವ ವೇಳೆಯಲ್ಲಿ ಖಾಲಿ ಕುರ್ಚಿಗಳನ್ನ ಲೆಕ್ಕ ಮಾಡಿದ್ದಾರೆ. ಜನಸ್ಪಂದನದಲ್ಲಿ ಖಾಲಿ ಕುರ್ಚಿ ಇರುವ ವಿಡಿಯೋ ನನ್ನ ಬಳಿ ಇವೆ. ಖಾಲಿ ಕುರ್ಚಿಗಳಿಗೆ ಲಕ್ಷಾಂತರ ಜನ ಎಂದು ಹೇಳಿದ್ದಾರೆ ಎಂದು ಎಂ.ಬಿ ಪಾಟೀಲ್ ವ್ಯಂಗ್ಯವಾಡಿದರು.