ಶಿವಮೊಗ್ಗ: ಆಟೋದಲ್ಲಿ ಬಿಟ್ಟು ಹೋಗಿದ್ದ 2.20 ಲಕ್ಷ ರೂ. ಬೆಲೆಯ ಬಂಗಾರ ಆಭರಣಗಳನ್ನು ಆಟೋ ಚಾಲಕ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಶಿವಮೊಗ್ಗ ನಗರದ ಕೆ.ಎಸ್.ಆರ್.ಟಿ.ಸಿ. ಮಲ್ನಾಡ್ ಆಟೋ ನಿಲ್ದಾಣದ ಚಾಲಕ ಮೊಹಮ್ಮದ್ ಗೌಸ್ ಅವರ ಆಟೋದಲ್ಲಿ ಶನಿವಾರ ಟಿಪ್ಪುನಗರಕ್ಕೆ ಹೋಗಿದ್ದ ಶಿಕಾರಿಪುರ ತಾಲ್ಲೂಕಿನ ಚಿಕ್ಕಕಬ್ಬಾರ್ ಗ್ರಾಮದ ಶೆಹತಾಜ್ ಬಾನು, ಅವರು ಆಟೋ ಸೀಟ್ ಹಿಂಭಾಗದಲ್ಲಿ ಕೆಲವು ಬ್ಯಾಗ್ ಇರಿಸಿದ್ದರು. ಆಗ ಮಗು ಒಂದು ಬ್ಯಾಗ್ ಎತ್ತಿ ಆಟೋ ಸೀಟ್ ಹಿಂಭಾಗ ಎಸೆದಿದೆ. ಟಿಪ್ಪುನಗರದಲ್ಲಿ ಇಳಿದ ಅವರು ಬೇರೆಲ್ಲಾ ವಸ್ತುಗಳನ್ನು ತೆಗೆದುಕೊಂಡು, ಒಡವೆ ಇದ್ದ ಬ್ಯಾಗ್ ಅಲ್ಲೇ ಬಿಟ್ಟು ಹೋಗಿದ್ದಾರೆ.
ಮನೆಯಲ್ಲಿ ಆಭರಣದ ಬ್ಯಾಗ್ ನಾಪತ್ತೆಯಾಗಿರುವುದು ಗೊತ್ತಾಗಿ ತಕ್ಷಣವೇ ಅವರು ಆಟೋ ಚಾಲಕನಿಗಾಗಿ ಹುಡುಕಾಡಿ ಬಳಿಕ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆಟೋ ಚಾಲಕ ಮೊಹಮ್ಮದ್ ಗೌಸ್ ಭಾನುವಾರವಿಡೀ ಬಾಡಿಗೆ ಮಾಡಿದ್ದಾರೆ. ಆಟೋದಲ್ಲಿದ್ದ ಬ್ಯಾಗ್ ಅನ್ನು ಅವರೂ ಗಮನಿಸಿಲ್ಲ. ಸೋಮವಾರ ಬೆಳಗ್ಗೆ ಆಟೋ ತೊಳೆಯಲು ಹೋದಾಗ ಅವರ ಗಮನಕ್ಕೆ ಬಂದು ಅದರಲ್ಲಿದ್ದ ವಿಳಾಸ ಗಮನಿಸಿ ಟಿಪ್ಪುನಗರದಲ್ಲಿ ಹುಡುಕಾಡಿದ್ದಾರೆ.
ಬಳಿಕ ಆಭರಣ ಕಳೆದುಕೊಂಡ ಮಹಿಳೆ ಸಿಕ್ಕಿದ್ದು, ಅವರದೇ ಆಭರಣ ಎಂದು ಖಚಿತಪಡಿಸಿಕೊಂಡ ನಂತರ ದೊಡ್ಡಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಇಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಸಮ್ಮುಖದಲ್ಲಿ 2.20 ಲಕ್ಷ ರೂ. ಮೌಲ್ಯದ ಆಭರಣ ವಾರಸುದಾರರಿಗೆ ಮರಳಿಸಿದ್ದಾರೆ. ಆಟೋಚಾಲಕ ಮೊಹಮ್ಮದ್ ಗೌಸ್ ಅವರ ಪ್ರಾಮಾಣಿಕತೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಿ ಪ್ರಸಾದ್ ಪ್ರಶಂಸಾ ಪತ್ರವನ್ನು ನೀಡಿದ್ದಾರೆ.