ತೆಲುಗು ಸಿನಿಮಾ ರಂಗದ ರೆಬೆಲ್ ಸ್ಟಾರ್ ಎಂದೇ ಖ್ಯಾತರಾಗಿದ್ದ ಉಪ್ಪಲಪತ್ತಿ ವೆಂಕಟ ಕೃಷ್ಣಂರಾಜು ಇಂದು ನಸುಕಿನ ಜಾವ ತಮ್ಮ ನಿವಾಸದಲ್ಲಿ ನಿಧನರಾದರು.
ನಟ, ಪತ್ರಕರ್ತ, ಛಾಯಾಗ್ರಾಹಕರಾಗಿ ಕೃಷ್ಣಂರಾಜು ಜನಪ್ರಿಯರಾಗಿದ್ದರು. ಪತ್ನಿ, ಮೂವರು ಪುತ್ರಿಯರು, ಅಪಾರ ಸ್ನೇಹಿತರು ಹಾಗೂ ಬಂಧುಗಳನ್ನು ಅವರು ಅಗಲಿದ್ದಾರೆ. ‘ಬಾಹುಬಲಿ’ ಖ್ಯಾತಿಯ ಪ್ರಭಾಸ್ ಸಹ ಕೃಷ್ಣಂರಾಜು ಅವರ ಹತ್ತಿರದ ಸಂಬಂಧಿ. ಕೃಷ್ಣಂರಾಜು ಅವರು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ, ಗ್ರಾಹಕ ಸೇವೆಗಳು, ಆಹಾರ ಮತ್ತು ಪಡಿತರ ವಿತರಣೆ, ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲಟೂರು ಗ್ರಾಮದಲ್ಲಿ 1940ರಲ್ಲಿ ಕೃಷ್ಣಂರಾಜು ಜನಿಸಿದರು. 1966ರಲ್ಲಿ ‘ಚಿಲಕ ಗೋರಿಂಕಾ’ ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣಹಚ್ಚಿದ್ದರು. ನಂತರ ಹಲವು ಚಿತ್ರಗಳಲ್ಲಿ ಖಳನಾಯಕನಾಗಿ ಅಭಿನಯಿಸಿದರು. ನಂತರದ ದಿನಗಳಲ್ಲಿ ನಾಯಕನಟನಾಗಿ ಅಪಾರ ಜನಪ್ರಿಯ ಪಡೆದುಕೊಂಡರು. ಯುವಜನರ ಆಶೋತ್ತರಗಳಿಗೆ ಸ್ಪಂದಿಸುವ, ಸಿಡುಕು ಸ್ವಭಾವದ ವ್ಯಕ್ತಿಯಾಗಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಅದಲ್ಲದೇ, ಸುಮಾರು 183 ಚಿತ್ರಗಳಲ್ಲಿ ನಟಿಸಿದ್ದ ಕೃಷ್ಣಂರಾಜು ಅವರು ಕೊನೆಯ ಚಿತ್ರ ‘ರಾಧೇ ಶ್ಯಾಮ್’. ಇವರ ಹತ್ತಿರದ ಸಂಬಂಧ ಪ್ರಭಾಸ್ ಈ ಚಿತ್ರದ ನಾಯಕರಾಗಿದ್ದರು. ಕೃಷ್ಣಂರಾಜು ನಿಧನಕ್ಕೆ ಹಲವು ಸಿನಿ ನಟರು, ಗಣ್ಯರು ಮತ್ತು ಅಭಿಮಾನಿಗಳು ಟ್ವೀಟ್ ಮೂಲಕ ತಮ್ಮ ಸಂತಾಪ ಸಂದೇಶ ಹಂಚಿಕೊಂಡಿದ್ದಾರೆ.