ಕೇರಳ : ಏನೋ ಮಾಡೋಕೆ ಹೋಗಿ ಮತ್ತೇನೊ ಆಯ್ತು ಅನ್ನೋ ಹಾಗೆ ಹಾಗಿದೆ ಕಾಂಗ್ರೆಸ್ ಯುವರಾಜನ ಕಥೆ. ಭಾರತ್ ಜೋಡೋ ಯಾತ್ರೆ ಮಾಡ್ತೀನಿ ಅಂತ ಹೋಗಿ ಇದೀಗ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಹೌದು, 150 ದಿನಗಳ ಯಾತ್ರೆ ಹಮ್ಮಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ವಿವಾದಿತ ಕ್ಯಾಥೋಲಿಕ್ ಪಾದ್ರಿ ಜಾರ್ಜ್ ಪೊನ್ನಯ್ಯನನ್ನು ಭೇಟಿ ಮಾಡಿದ್ರು. ಆದ್ರೆ, ಭೇಟಿ ಮಾಡಿದ್ದು ವಿವಾದವಲ್ಲ. ಆದ್ರೆ, ಭೇಟಿ ಮಾಡಿದ ವೇಳೆ, ರಾಹುಲ್ ಗಾಂಧಿ ಪಾದ್ರಿಯನ್ನು ಕೇಳಿದ ಪ್ರಶ್ನೆ ಹಾಗು ಅದಕ್ಕೆ ಪಾದ್ರಿ ಕೊಟ್ಟಿರುವ ಉತ್ತರ ಕಾಂಟ್ರವರ್ಸಿಗೆ ಕಾರಣವಾಗಿದೆ.
ಇವರಿಬ್ಬರು ಮಾತಾಡಿಕೊಳ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪ್ರಚೋದನಾತ್ಮಕವಾಗಿದೆ. ರಾಹುಲ್ ಗಾಂಧಿಗೆ, ಯೇಸು ಕ್ರಿಸ್ತ ಮಾತ್ರ ನಿಜವಾದ ದೇವರು, ಶಕ್ತಿ ದೇವತೆ ಅಥವಾ ಹಿಂದೂ ದೇವರುಗಳು ದೇವರೇ ಅಲ್ಲ ಎಂದು ಹೇಳಿದ್ದು, ಇದು ಹಿಂದೂಗಳ ಕಣ್ಣು ಕೆಂಪಾಗಿಸಿದೆ.
ರಾಹುಲ್ ಗಾಂಧಿ ಅವರು ಪಾದ್ರಿಯನ್ನು ಭೇಟಿ ಮಾಡಿ ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸಿದ ವಿಡಿಯೋ ತುಣುಕಿನ ಕುರಿತು ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ರಾಹುಲ್ ಗಾಂಧಿಯವರ ದ್ವೇಷ ಪ್ರಚಾರ ಎಂದು ಬಿಜೆಪಿ ಕಿಡಿ ಕಾರಿದೆ. ಇಷ್ಟೆಲ್ಲಾ ಆದ್ರೂ ಕಾಂಗ್ರೆಸ್‌ನವರು ಮಾತ್ರ ಸಮರ್ಥನೆ ಮಾಡಿಕೊಳ್ತಿದ್ದಾರೆ.
ಇಷ್ಟೇ ಅಲ್ಲ, ಜಾರ್ಜ್ ಪೊನ್ನಯ್ಯ ಹಲವು ವಿವಾದಾತ್ಮಕ ಹೇಳಿಕೆಗಳಿಂದ ಈ ಮೊದಲು ಕೂಡ ಸದ್ದು ಮಾಡಿದ್ದರು. ಕಳೆದ ವರ್ಷ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ್ದಕ್ಕಾಗಿ ಅವರನ್ನು ಮಧುರೈನಲ್ಲಿ ಬಂಧಿಸಲಾಗಿತ್ತು. ರಾಹುಲ್ ಗಾಂಧಿ ಅವರು ಜಾರ್ಜ್ ಪೊನ್ನಯ್ಯ ಅವರನ್ನು ಚರ್ಚ್‌ನಲ್ಲಿ ಭೇಟಿಯಾದರು. ರಾಹುಲ್ ಗಾಂಧಿ 150 ದಿನಗಳ ಭಾರತ ಜೋಡೋ ಯಾತ್ರೆಯಲ್ಲಿದ್ದಾರೆ. ಹೀಗಿರುವಾಗ ಸದ್ಯ ಪಾದ್ರಿ ಭೇಟಿ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.