Monday, January 6, 2025

ಮುಳುಗಿದ ಬೆಂಗಳೂರಿಗೆ ಸಾಂಕ್ರಾಮಿಕ ರೋಗಗಳ ಆತಂಕ..!

ಬೆಂಗಳೂರು : ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಗಳಿಸಿರುವ ಬೆಂಗಳೂರು ಮಳೆಯ ಅಬ್ಬರಕ್ಕೆ ತತ್ತರಿಸಿ ಹೋಗಿದೆ. ಗಾರ್ಡನ್ ಸಿಟಿಯಾಗಿದ್ದ ಬೆಂಗಳೂರಿನ ಮಾನ ಮಳೆ ಅವಾಂತರದಿಂದ ಜಗತ್ತಿನೆದುರು ಬಟಾಬಯಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಮೊಣಕಾಲುದ್ದ ನೀರು ನಿಂತ್ರೆ.. ಅಪಾರ್ಟ್​ಮೆಂಟ್​, ವಿಲ್ಲಾಗಳು ಕೂಡ ಜಲಾವೃತವಾಗಿದ್ವು. ಮಳೆ ನೀರಿನೊಂದಿಗೆ ಕೊಚ್ಚಿಕೊಂಡು ಬಂದ ಗಲೀಜು, ಕೊಳಚೆ ನೀರು ತುಂಬಿ ಗಾರ್ಬೇಜ್ ಸಿಟಿಯಂತಾಗಿದೆ.

ಬೆಳ್ಳಂದೂರು, ಸರ್ಜಾಪುರ ಮುಖ್ಯರಸ್ತೆ, ಯಮಲೂರು ಪ್ರದೇಶದಲ್ಲಿ ಕೊಳಚೆ ನೀರು ಸಂಗ್ರಹವಾಗಿ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಹಲವೆಡೆ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಒಂದ್ಕಡೆ ಕುಡಿಯೋಕೆ ನೀರಿಲ್ಲ. ಮತ್ತೊಂದೆಡೆ ವಿದ್ಯುತ್ ಸಂಪರ್ಕವೂ ಕಡಿತವಾಗಿದೆ. ಈ ಪ್ರದೇಶಗಳ ಜನರ ಬದುಕು ದುಸ್ತರವಾಗಿದೆ. ನೀರಿನಿಂದ ಜಲಾವೃತಗೊಂಡಿರುವ ಕರಿಯಮ್ಮನ ಅಗ್ರಹಾರ, ಮಾರತ್‌ಹಳ್ಳಿ, ಮುನ್ನಿಕೊಲಾಲ, ಹೊರವರ್ತುಲ ರಸ್ತೆಯ ಕೆಲವು ಭಾಗಗಳಲ್ಲಿ ಮಳೆಯ ಆಫ್ಟರ್ ಎಫೆಕ್ಟ್, ಕೆಸರುಮಯವಾಗಿದೆ.

ಇನ್ನು, ಮಳೆಯ ನೀರಿನಲ್ಲಿ ಮುಳುಗಿದ್ದ ವಾಹನಗಳು ಸದ್ಯ ಗುಜರಿಗೆ ಹಾಕುವ ಸ್ಥಿತಿಯಲ್ಲಿ ಇದೆ. ಯಮಲೂರು, ರೈನ್ ಬೋ ಡ್ರೈನ್ ಲೇಔಟ್, ಕಂಟ್ರಿ ಸೈಡ್ ಲೇಔಟ್ ಪರಿಸ್ಥಿತಿ ಸುಧಾರಿಸುತ್ತಿದೆ. ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಮುಳುಗಿರೋ ತಮ್ಮ ವಾಹನಗಳನ್ನು ಟೊಯಿಂಗ್ ಮಾಡಿ ಗ್ಯಾರೇಜ್​ಗಳಿಗೆ ಬಿಟ್ಟು, ತಮ್ಮ ಮನೆಗಳನ್ನು ಸ್ವಚ್ಛ ಮಾಡಿಕೊಳ್ಳುತ್ತಿದ್ದಾರೆ.

ಕೆಲ ಅಪಾರ್ಟ್‌ಮೆಂಟ್​ಗಳಲ್ಲಿ ಕೊಳಚೆ ನೀರು ಸಂಗ್ರಹವಾಗಿದ್ದು, ನೀರನ್ನು ಹೊರ ಹಾಕುವ ಕೆಲಸವನ್ನು ತಾವೇ ಮಾಡುತ್ತಿದ್ದಾರೆ. ಕೊಳಚೆ ನೀರು ನಿಂತಿರುವುದರಿಂದ ಸಾಂಕ್ರಾಮಿಕ ರೋಗಗಳ ಭೀತಿಯೂ ಎದುರಾಗಿದೆ. ಕೆಲವು ಪ್ರದೇಶಗಳು ಕೆಸರುಗದ್ದೆಯಾಗಿ ಮಾರ್ಪಟ್ಟಿದ್ದು, ಜನರು ಆತಂಕದಲ್ಲೇ ಬದುಕು ಕಳೆಯುವಂತಾಗಿದೆ. ವಿಲ್ಲಾಗಳನ್ನು ತೊರೆದಿರುವ ನಿವಾಸಿಗಳು, ಮತ್ತೆ ವಾಪಸ್ಸು ಆಗಿದ್ದಾರೆ. ಆದ್ರೆ, ಯಾವಾಗ ಸಾಂಕ್ರಾಮಿಕ ರೋಗ ಹರಡುತ್ತೆ ಅನ್ನೋ ಆತಂಕದಲ್ಲಿ ಜೀವನ ಸಾಗಿಸಬೇಕಾದ ಸ್ಥಿತಿ ನಿರ್ಮಾಣ ಆಗಿದೆ.

ಸ್ವಾತಿ ಪುಲಗಂಟಿ, ಪವರ್​ ಟಿವಿ, ಬೆಂಗಳೂರು

RELATED ARTICLES

Related Articles

TRENDING ARTICLES