Monday, December 23, 2024

ನಾಳೆ ತೆಲಂಗಾಣ ಸಿಎಂ ಕೆಸಿಆರ್ ನ ಭೇಟಿಯಾಗಲಿರುವ ಹೆಚ್.ಡಿ ಕುಮಾರಸ್ವಾಮಿ

ಬೆಂಗಳೂರು: ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರನ್ನ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ ಹೈದರಾಬಾದ್ ನಲ್ಲಿ ಭೇಟಿಯಾಗಲಿದ್ದಾರೆ.

ರಾಜಕೀಯ ವಲಯದಲ್ಲಿ ಈ ಇಬ್ಬರು ನಾಯಕರ ಭೇಟಿಯನ್ನು ಬಹಳ ಮಹತ್ವದ ರಾಜಕೀಯ ಬೆಳವಣಿಗೆ ಎಂದು ಬಣ್ಣಿಸಲಾಗಿದೆ. ಹೈದರಾಬಾದ್ ನಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ನಾಳೆ ಮಧ್ಯಾಹ್ನ 1ರಿಂದ 3 ಗಂಟೆವರೆಗೂ ಉಭಯ ನಾಯಕರ ಭೇಟಿ ನಡೆಯಲಿದೆ. ಇದೇ ವೇಳೆ ತೆಲಂಗಾಣ ಸಿಎಂ ಜತೆ ಕುಮಾರಸ್ವಾಮಿ ಅವರು ಭೋಜನವನ್ನು ಸ್ವೀಕರಿಸಲಿದ್ದಾರೆ.

ಸಭೆಯಲ್ಲಿ ಇಬ್ಬರೂ ನಾಯಕರು ಕರ್ನಾಟಕ, ತೆಲಂಗಾಣ ರಾಜಕೀಯ ಹಾಗೂ ಅದರಲ್ಲೂ ರಾಷ್ಟ್ರಮಟ್ಟದ ರಾಜಕಾರಣದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಕಳೆದ ಮೇ ತಿಂಗಳಲ್ಲಿ ಕೆ.ಚಂದ್ರಶೇಖರ್ ರಾವ್ ಅವರು ಬೆಂಗಳೂರಿಗೆ ಆಗಮಿಸಿ ಮಾಜಿ ಪ್ರಧಾನಿಗಳು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದರು.

ಆಗ ಮಾತನಾಡಿದ್ದ ಉಭಯ ನಾಯಕರು, ವಿಜಯದಶಮಿ ಹೊತ್ತಿಗೆ ರಾಷ್ಟ್ರ ಮಟ್ಟದಲ್ಲಿ ಪರ್ಯಾಯ ರಾಜಕೀಯ ಶಕ್ತಿಯನ್ನು ಹುಟ್ಟು ಹಾಕುವ ಸುಳಿವು ನೀಡಿದ್ದರು. ಆ ನಿಟ್ಟಿನಲ್ಲಿ ಇಬ್ಬರು ನಾಯಕರು ಮಾತುಕತೆ ನಡೆಸಲಿದ್ದಾರೆ. ಮೇಲಾಗಿ, ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಅಧಿಕಾರದಲ್ಲಿದ್ದು, ಕರ್ನಾಟಕದಲ್ಲಿಯೂ ಪ್ರಾದೇಶಿಕ ಪಕ್ಷ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎನ್ನುವುದು ಕೆಸಿಆರ್ ಅವರ ಒತ್ತದೆಯಾಗಿದೆ. ಈ ನಿಟ್ಟಿನಲ್ಲಿ ಹಿರಿಯರಾದ ಅವರನ್ನು ಭೇಟಿ ಮಾಡಲಾಗುತ್ತಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಇನ್ನೊಂದೆಡೆ ದಕ್ಷಿಣ ಭಾರತದಲ್ಲಿ ಅಧಿಕಾರದಲ್ಲಿರುವ ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳು ಶೀಘ್ರದಲ್ಲಿಯೇ ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ನಿರೀಕ್ಷೆ ಇದೆ. ಮುಖ್ಯವಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಮತ್ತು ಕುಮಾರಸ್ವಾಮಿ ಅವರು ಭೇಟಿ ಮಾಡುವ ಸಾಧ್ಯತೆ ಇದೆ.

ಇದೇ ತಿಂಗಳ 5ರಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನವದೆಹಲಿಯಲ್ಲಿರುವ ಮಾಜಿ ಪ್ರಧಾನಿಗಳಾದ ಹೆಚ್.ಡಿ ದೇವೇಗೌಡರ ನಿವಾಸಕ್ಕೆ ಆಗಮಿಸಿ ಕುಮಾರಸ್ವಾಮಿ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದರು.

RELATED ARTICLES

Related Articles

TRENDING ARTICLES