Wednesday, January 22, 2025

ಪತ್ರಕರ್ತ ದಿ. ಗುರುಲಿಂಗಸ್ವಾಮಿ ಎಲ್ಲರ ಮನದಾಳದಲ್ಲಿ ಚಿರಸ್ಮರಣೀಯ: ಸಿಎಂ ಬೊಮ್ಮಾಯಿ

ಬೆಂಗಳೂರು: ಪತ್ರಕರ್ತ ದಿವಂಗತ ಗುರುಲಿಂಗಸ್ವಾಮಿ ಎಲ್ಲರ ಮನದಾಳದಲ್ಲಿ ಚಿರಸ್ಮರಣೀಯ. ಹುಟ್ಟು ಮತ್ತು ಸಾವು ಎರಡೂ ನಮ್ಮ ಕೈಯಲ್ಲಿಲ್ಲ. ಸಾವು ಯಾವಾಗ ಬರುತ್ತದೆ ಎಂದು ತಿಳಿಯುವುದಿಲ್ಲ. ಆದರೆ ಬದುಕು ಬಹಳ ದೊಡ್ಡದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ಉತ್ತರ ಕರ್ನಾಟಕ ಸಂಘ-ಸಂಸ್ಥೆಗಳ ಮಹಾ ಸಂಸ್ಥೆ ವತಿಯಿಂದ ಗಾಂಧಿ ಭವನದಲ್ಲಿ ದಿವಂಗತ ಪತ್ರಕರ್ತ ಗುರುಲಿಂಗಸ್ವಾಮಿ ಹೊಳಿಮಠ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಒಬ್ಬ ವ್ಯಕ್ತಿ ನಮ್ಮನ್ನು ಅಗಲಿದಾಗ ಅವನು ಯಾವ ರೀತಿ ಬದುಕಿದ್ದ ಎನ್ನುವುದು ಮಹತ್ವ ಪಡೆಯುತ್ತದೆ ಎಂದರು.

ಸ್ನೇಹ, ಪ್ರೀತಿ, ವಿಶ್ವಾಸ, ಕರುಣೆ, ಈ ಮಾನವೀಯ ಗುಣಗಳಿರುವ ಮನುಷ್ಯನಿಗೆ ಮಾನವ ಎನ್ನುತ್ತಾರೆ. ಗುರುಲಿಂಗಸ್ವಾಮಿ ಅವರು ನನಗೆ 2 ದಶಕಗಳಿಂದ ಪರಿಚಯ. ಹುಬ್ಬಳ್ಳಿಯ ಖಾಸಗಿ ಪತ್ರಿಕೆಯಲ್ಲಿ ಕೆಲಸ ಮಾಡುವಾಗಿನಿಂದ ಅವರು ನನಗೆ ಗೊತ್ತು. ನನ್ನ ಮತ್ತೊಬ್ಬ ಆತ್ಮೀಯ ಸ್ನೇಹಿತ ದಿವಂಗತ ಪತ್ರಕರ್ತ ನಾಗರಾಜ ಜಮಖಂಡಿಯವರ ಅತ್ಯಂತ ಸ್ನೇಹಪರ ಒಡನಾಡಿ ಎಂದು ನೆನಪುಗಳ ಬಗ್ಗೆ ಸಿಎಂ ಮೆಲುಕು ಹಾಕಿದರು.

ನಾಗರಾಜ ಜಮಖಂಡಿಯವರೆ ನನಗೆ ಗುರು ಗುರುಲಿಂಗಸ್ವಾಮಿಯವರನ್ನು ಪರಿಚಯ ಮಾಡಿಸಿದ್ದು. ನಾಗರಾಜ ಜಮಖಂಡಿಯೂ ಬಹಳ ಕ್ರಿಯಾಶೀಲ ವ್ಯಕ್ತಿ. ಬಹಳ ಚಟುವಟಿಕೆಯಿಂದಿದ್ದರು. ಗುರು ಲಿಂಗಸ್ವಾಮಿ ಸಹ ಅಷ್ಟೇ ಕ್ರಿಯಾಶೀಲ ವ್ಯಕ್ತಿ. ಯುವಕರು ಕ್ರಿಯಾಶೀಲರಾಗಿದ್ದವರ ಬಗ್ಗೆ ನನಗೆ ಪ್ರೀತಿ. ಹಾಗಾಗಿ ಗುರುಲಿಂಗಸ್ವಾಮಿ ಕೆಲವೇ ದಿನಗಳಲ್ಲಿ ನನಗೆ ಅತ್ಯಂತ ಆತ್ಮೀಯರಾದರು. ಆ ಸಂದರ್ಭದಲ್ಲಿ ನಾನು ವಿಧಾನ ಪರಿಷತ್ ಸದಸ್ಯ ನಾಗಿದ್ದೆ. ಹೋರಾಟದ ದಿನಗಳಲ್ಲಿ ಒಬ್ಬ ಪತ್ರಕರ್ತ ಏನು ಮಾಡಲು ಸಾಧ್ಯವಿದೆಯೋ ಅದನ್ನು ಮಾಡುತ್ತಾ ಅದರ ಜೊತೆ ಜೊತೆಗೆ ಒಬ್ಬ ಹೋರಾಟಗಾರ ಏನು ಮಾಡಲು ಸಾಧ್ಯವಿದೆ ಎಂದು ಜೊತೆಗೆ ಹೋರಾಟ ಮಾಡಿ ತೋರಿಸಿದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.

ಗುರು ಲಿಂಗಸ್ವಾಮಿಯವರ ಕುಟುಂಬದ ಬಗ್ಗೆ ನನಗೆ ತಿಳಿದಿದೆ. ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಓದುವ ಸಂದರ್ಭದಲ್ಲಿ ಬಹಳಷ್ಟು ಜನ ಯಾಕೆ ಹೋಗುತ್ತೀರಿ ಎಂದಿದ್ದರು. ಆದರೆ ಅವರಿಗೆ ತಿಳಿದಿತ್ತು. ಅಲ್ಲಿ ಸ್ನಾತಕೋತ್ತರ ಪದವಿ ಪಡೆದರೆ ಅವಕಾಶಗಳೇನಿವೆ ಎಂದು ತಿಳಿದಿತ್ತು. ಹೀಗಾಗಿ ಅಲ್ಲಿಗೆ ಪ್ರವೇಶ ಪಡೆದು, ಸ್ವಂತ ಶಕ್ತಿಯ ಮೇಲೆ ಪದವಿ ಪಡೆದು ಬದುಕು ಪ್ರಾರಂಭಿಸಿದರು. ಹೀಗಾಗಿ ಅವರಿಗೆ ಬಡತನ ಎಂದರೇನು, ಬಡವರು ಎಂದರೇನು, ಕಷ್ಟ ಎಂದರೇನು ಎಂದೂ ತಿಳಿದಿತ್ತು. ಇವ್ಯಾವುದೂ ಅವರ ಕ್ರಿಯಾಶೀಲತೆಗೆ ಅಡ್ಡಿ ಬರಲಿಲ್ಲ. ಅವರಿಗೆ ಇದರಿಂದ ಗಳಿಸಬೇಕೆಂಬ ಆಸೆಯೂ ಇರಲಿಲ್ಲ. ಕೇವಲ ತಮ್ಮ ವೃತ್ತಿಯಲ್ಲಿ.ಮುಂದು ಬಂದು ಜನರಿಗೆ ಸಹಾಯ ಮಾಡಬೇಕೆನ್ನುವ ಹಂಬಲ ಇತ್ತು. ಅವರೊಬ್ಬ ದಕ್ಷ, ಪ್ರಾಮಾಣಿಕ ಪತ್ರಕರ್ತ. ಅವರ ಬರಹಗಳಲ್ಲಿ ಮೊನಚಿತ್ತು. ನಿಖರತೆಯ ಬಗ್ಗೆ ಖಾತ್ರಿಪಡಿಸಿಕೊಳ್ಳುತ್ತಿದುದರಿಂದ ಅವರ ಬರಹಕ್ಕೆ ವಿಶ್ವಾಸಾರ್ಹತೆ ಇತ್ತು ಎಂದರು.

ವಿವಿಧ ಪತ್ರಿಕೆಗಳಲ್ಲಿ, ಖಾಸಗಿ ಚಾನಲ್​ನಲ್ಲಿ ನನ್ನ ಸಂದರ್ಶನವನ್ನೂ ಅವರು ಮಾಡಿದ್ದರು. ವೃತ್ತಿಪರತೆಗಿಂತ ಹೆಚ್ಚಾಗಿ ಸ್ನೇಹಜೀವಿ. ಬೆಂಗಳೂರಿಗೆ ಬಂದು ನೆಲೆಯೂರಿ ನಿಲ್ಲಲು ಅವಕಾಶ ಸಿಕ್ಕರೆ ಮತ್ತಷ್ಟು ಹುಡುಗರನ್ನು ಕರೆತಂದು ಬೆಳೆಸುವ ಗುಣ ಉತ್ತರ ಕರ್ನಾಟಕದ ಹುಡುಗರಲ್ಲಿ ಮೊದಲಿನಿಂದಲೂ ಇದೆ. ನಾಗರಾಜ ಜಮಖಂಡಿ ಮತ್ತು ಗುರುಲಿಂಗಸ್ವಾಮಿ ಅವರಲ್ಲಿ ಇದು ಹೆಚ್ಚಿಗೆ ಇತ್ತು. ಸದಾ ಹೊಸತನ್ನು ಮಾಡಬೇಕೆನ್ನುವ ಹುಚ್ಚಿತ್ತು. ನಾಗರಾಜ ಜಮಖಂಡಿಯವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಪ್ರತಿ ವರ್ಷ ಗುರುಲಿಂಗಸ್ವಾಮಿ ಆಯೋಜನೆ ಮಾಡುತ್ತಿದ್ದರು. ನಾನು ಎಲ್ಲೇ ಇದ್ದರೂ ದಿನಾಂಕ ನಿಗದಿ ಮಾಡಿ ಆಯೋಜನೆ ಮಾಡುತ್ತಿದ್ದರು. ಈ ವರ್ಷವೂ ಚೆನ್ನಾಗಿ ಮಾಡೋಣ ಎಂದಿದ್ದರು. ಆದರೆ, ಗುರುಲಿಂಗಸ್ವಾಮಿಯ ಶ್ರದ್ಧಾಂಜಲಿ ಮಾಡಬೇಕಾಗಿಬರಹುದೆಂದು ಯೋಚಿಸಿರಲಿಲ್ಲ ಎಂದರು.

ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದಾರೆ. ಸಣ್ಣ ವಯಸ್ಸಿನಲ್ಲೇ ಸಾಧನೆ ಮಾಡಿದವರು ಜಗತ್ತನ್ನು ಬೇಗ ಬಿಟ್ಟುಹೋಗಿದ್ದಾರೆ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವವನು ಸಾಧಕ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಬದುಕು ಶ್ರೀಮಂತ ವಾಗಿದ್ದು ನಮ್ಮೆಲ್ಲರ ಮನಸ್ಸಿನಲ್ಲಿ ಜೀವಂತವಾಗಿ ಇರುತ್ತಾರೆ. ಗುರುಂಲಿಗಸ್ವಾಮಿ ನನ್ನ ಪತ್ರಿಕಾ ಸಂಯೋಜಕರಾಗಿ ದಿನನಿತ್ಯ ನನ್ನನ್ನು ಭೇಟಿಯಾಗುತ್ತಿದ್ದರು. ಮಾತನಾಡುತ್ತಿದ್ದರು. ಸಾಯುವ ಬೆಳಿಗ್ಗೆಯೂ ಸಂದೇಶ ಕಳಿಸಿದ್ದರು. ರಾತ್ರಿಯಾಗಲಿ, ಹಗಲಾಗಲಿ, ಪ್ರತಿದಿನ ಪ್ರತಿಕೆಯಲ್ಲಿ ಬಂದದ್ದನ್ನು ತಿಳಿಸುವ ಕೆಲಸವನ್ನು ಅತ್ಯಂತ ದಕ್ಷತೆಯಿಂದ ಪ್ರಾಮಾಣಿಕವಾಗಿ ಮಾಡುತ್ತಿದ್ದರು. ಅವರ ಅಗಳಿಕೆಯಿಂದ ಅವರ ಕುಟುಂಬ ಬಿಟ್ಟರೆ ನನಗೆ ನಷ್ಟವಾಗಿದೆ. ಇವರಿಬ್ಬರೂ ಹತ್ತಿರವಿದ್ದು ದೂರಾದವರು. ಏನೇ ಆಗಲಿ ಬದುಕು ಮುಂದುವರಿಯಬೇಕು. ಬದುಕಿನ ಬಗ್ಗೆ ಯೋಚಿಸಿ ಮುನ್ನಡೆಯಬೇಕು. ಕುಟುಂಬದೊಂದಿಗೆ ನಾವಿದ್ದೇವೆ ಎಂಬ ಧೈರ್ಯ ತುಂಬೋಣ.

ಒಳ್ಳೆಯ ಕಿರಿಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಯುವಕರ ಶಕ್ತಿ ನಮಗೆ ಸ್ಪಂದಿಸುತ್ತಿತ್ತು. ಅವರ ಕುಟುಂಬಕ್ಕೆ ಭಗವಂತ ಧೈರ್ಯ ಮಕ್ಕಳಿಗೆ ಭವಿಷ್ಯ ನೀಡಲಿ ಎಂದು ಹಾರೈಸಿದರು. ಉತ್ತರ ಕರ್ನಾಟಕದ ಸಂಘದ ಅಪೇಕ್ಷೆಯಂತೆ ಗುರುಲಿಂಗಸ್ವಾಮಿ ಶ್ರಮಕ್ಕೆ ಗೌರವ ತರುವ ಕೆಲಸ ಮಾಡೋಣ ಸಿಎಂ ಹೇಳಿದರು. ಇನ್ನು ಈ ವೇದಿಕೆಯಲ್ಲಿ ಗುರುಲಿಂಗಸ್ವಾಮಿ ಅವರ ಪತ್ನಿ ಹಾಗೂ ಉ.ಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ಅಧ್ಯಕ್ಷ ಶಿವಕುಮಾರ್​ ಮೇಟಿ ಅವರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES