ಚಿಕ್ಕಮಗಳೂರು : ಪೊಲೀಸ್ ಜೀಪನ್ನು ಪಲ್ಟಿ ಮಾಡಲು ಮುಂದಾದ ಹೋರಾಟಗಾರು. ಅರಣ್ಯ ಇಲಾಖೆ ಗೇಟ್ ಮುರಿಯಲು ಯತ್ನಿಸಿದ ಉದ್ರಿಕ್ತರು. ನ್ಯಾಯ ಕೇಳಿದವರ ಮೇಲೆಯೇ ಖಾಕಿ ಲಾಠಿ ಪ್ರಹಾರ. ಈ ದೃಶ್ಯ ಕಂಡು ಬಂದಿದ್ದು, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಅರಣ್ಯ ಇಲಾಖೆ ಕಚೇರಿ ಮುಂದೆ. ಈ ತಾಲೂಕಿನಲ್ಲಿ ತಿಂಗಳಲ್ಲೇ ಇಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.ಇದರಿಂದ ಕೆರಳಿದ ತಾಲೂಕಿನ ಜನ ಅಕ್ಷರಶಃ ಕೆಂಡಾಮಂಡಲರಾಗಿದ್ದರು. ಆಗಸ್ಟ್ 15ರಂದು ದನ ಹುಡುಕುತ್ತಿದ್ದ ವ್ಯಕ್ತಿ ಹಾಗೂ ಗುರುವಾರ ತೋಟದಿಂದ ಬರುತ್ತಿದ್ದ 45 ವರ್ಷದ ವ್ಯಕ್ತಿಯನ್ನು ಆನೆ ಬಲಿ ಪಡೆದಿತ್ತು. ಪ್ರತಿ ಬಾರಿ ಆನೆ ದಾಳಿಯಾದಾಗಲೂ ಅಧಿಕಾರಿಗಳು ನಮ್ಮ ಮೂಗಿಗೆ ತುಪ್ಪ ಸವರುತ್ತಾರೆ ಎಂದು ಪ್ರತಿಭಟನಾಕಾರರು ಕಿಡಿ ಕಾರಿದರು.
ಇಂದು ಮೃತದೇಹವನ್ನು ಅರಣ್ಯ ಇಲಾಖೆ ಬಾಗಿಲಲ್ಲಿ ಇಟ್ಟು ಈ ಸಾವಿಗೆ ಅಧಿಕಾರಿಗಳೇ ಕಾರಣ. ಇದು ಅಧಿಕಾರಿಗಳು ಮಾಡಿದ ಕೊಲೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ, ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರ ಮೇಲೆ ಮನಸ್ಸೋ ಇಚ್ಛೆ ಲಾಠಿ ಬೀಸಿದ್ದಾರೆ.
ಮೂಡಿಗೆರೆ ತಾಲೂಕಿನ ಕುಂದೂರು, ಸಾರಗೋಡು, ಗುತ್ತಿಹಳ್ಳಿ, ಊರಬಗೆ, ಕೋಗಿಲೆ, ಗೌಡಹಳ್ಳಿ, ದೇವವೃಂದ, ಬೈರಾಪುರ ಸೇರಿ ಹತ್ತಾರು ಹಳ್ಳಿಗಳಲ್ಲಿ ಆನೆ ಸಮಸ್ಯೆ ಮಿತಿ ಮೀರಿದೆ ಅಂತಾ ಮೂಡಿಗೆರೆ ಆರ್.ಎಫ್.ಓ. ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಒಟ್ಟಾರೆ, ಸ್ಥಳೀಯರು ಆನೆ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗಲೇ ಅಧಿಕಾರಿಗಳು ಕ್ರಮ ಕೈಗೊಂಡಿದ್ದರೆ ಏನೂ ಆಗುತ್ತಿರಲಿಲ್ಲ. ಪ್ರಾಣವೂ ಉಳಿಯೋದು. ಬೆಳೆಯೂ ಉಳಿಯೋದು. ಆದರೆ, ಅಧಿಕಾರಿಗಳು ಆಯ್ತು. ಮಾಡೋಣ, ಬರೋಣ,ಓಡಿಸೋಣ, ನೋಡೋಣ ಎಂಬ ಸಿದ್ಧ ಉತ್ತರ ಸ್ಥಳಿಯರನ್ನು ಈ ರೀತಿ ಕೆರಳಿಸಿತ್ತು.
- ಸಚಿನ್ ಶೆಟ್ಟಿ ಪವರ್ ಟಿವಿ ಚಿಕ್ಕಮಗಳೂರು.