Tuesday, May 21, 2024

ಬೆಂಗಳೂರಿಗರ ಗೋಳು ಕೇಳೋರು ಯಾರು..?

ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯನವ್ರು ಬೋಟ್ ಹತ್ತಿ, ಎಷ್ಟು ಚೆಂದವಾಗಿ ರೌಂಡ್ ಹಾಕ್ತಿದ್ದಾರೆ ಅಂತಾ.. ಇದು ಯಾವ್ದೋ ಫಾಲ್ಸ್, ಕೆರೆ ಅಥವಾ ನದಿಯಲ್ಲ.‌ ಸಿಲಿಕಾನ್ ಸಿಟಿಯಲ್ಲಿ ವಿಲಾಸಿ ಜೀವನ ನಡೆಸುವ, ಕೋಟ್ಯಾಧಿಪತಿಗಳೇ ಇರುವ ಎಪ್ಸಿಲಾನ್ ವಿಲ್ಲಾಗಳ ಪ್ರದೇಶ.

ಎರಡೇ ಮಳೆಗೆ ಇಲ್ಲಿನ 170ಕ್ಕೂ ಹೆಚ್ಚು ವಿಲ್ಲಾಗಳು ಮುಳುಗಡೆಯಾಗ್ಬಿಟ್ಟಿವೆ. ವಿಲ್ಲಾಗಳ ಮೊದಲ ಮಹಡಿವರೆಗೂ ಕೊಳಚೆ ನೀರು ತುಂಬಿ, ಗಬ್ಬು ನಾರುವ ಪ್ರದೇಶ ಆಗ್ಬಿಟ್ಟಿದೆ. ಅಂದಹಾಗೇ ಈ ವಿಲ್ಲಾಗಳಲ್ಲಿ ವಿಲಾಸಿ ಜೀವನ ನಡೆಸ್ತಿದ್ದೋರೆಲ್ಲಾ ಸಾವಿರ ಕೋಟಿ ಸರದಾರರು. ಬೈಜೂಸ್, ಜಾಕಿ ಸಂಸ್ಥೆಗಳಂತ ಘಟಾನುಘಟಿ ಉದ್ಯಮಿಗಳು ಇಲ್ಲಿ ವಿಲ್ಲಾಗಳನ್ನ ಖರೀದಿ ಮಾಡಿದ್ದಾರೆ. ಈಗ ಅಂತಹವರೆಲ್ಲಾ ವಿಲ್ಲಾಗಳನ್ನ ಬಿಟ್ಟು ಬೀದಿಯಲ್ಲಿ ನಿಲ್ಲೋ ಪರಿಸ್ಥಿತಿ ನಿರ್ಮಾಣ ಆಗ್ಬಿಟ್ಟಿದೆ.

ಕಳೆದ ನಾಲ್ಕು ದಿನಗಳಿಂದ ಫೈರ್ ಎಂಜಿನ್, ಜೆನರೇಟರ್‌ಗಳ ಮೂಲಕ ನೀರೆತ್ತುವ ಕಾರ್ಯ ನಡೀತಾನೇ ಇದೆ. ಆದ್ರೆ, ನೀರಿನ ಪ್ರಮಾಣ ಮಾತ್ರ ಕಡಿಮೆ ಆಗ್ತಿಲ್ಲ.. ಮನೆಗಳಲ್ಲಿ ಇರೋ ಹೈಫೈ ವಸ್ತುಗಳೆಲ್ಲಾ ನೀರಲ್ಲಿ ಹೋಮ ಆಗ್ಬಿಟ್ಟಿವೆ. ಎಷ್ಟಿದ್ದರೇನು? ಪ್ರಕೃತಿ ಮುಂದೆ ಮನುಷ್ಯ ಯಕಶ್ಚಿತ್ ಅನ್ನೋದನ್ನ ಮಳೆರಾಯ ಸಾಬೀತು ಮಾಡಿದ್ದಾನೆ.

ವಿಪಕ್ಷ ನಾಯಕ ಸಿದ್ದಾರಾಮಯ್ಯ, ಎಪ್ಸಿಲಾನ್ ವಿಲ್ಲಾಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ರು.. ಬೋಟ್ ನಲ್ಲಿ ಹೋಗಿ ಜಲಾವೃತಗೊಂಡ ವಿಲ್ಲಾಗಳನ್ನ ಒಂದ್ ರೌಂಡ್ ಹಾಕಿ ಬಂದ್ರು. ನಿವಾಸಿಗಳ ಗೋಳನ್ನ ಕೇಳಿ, ಬಿಜೆಪಿ ನಾಯಕರ ವಿರುದ್ಧ ವಾಬ್ಬಾಣ ಬಿಟ್ರು.

ಇನ್ನು ಸಿದ್ದರಾಮಯ್ಯ ರೌಂಡ್ಸ್ ಬೆನ್ನಲ್ಲೇ ಗೃಹ ಸಚಿವ ಆರಗ ಜ್ಞಾನೇಂದ್ರ ಬಂದು ಪರಿಶೀಲನೆ ನಡೆಸಿದ್ರು. ಅವ್ರು ಕೂಡ ಬೋಟ್‌ನಲ್ಲಿ ರೌಂಡ್ ಹಾಕಿ ಬಂದ್ರು. ಬೆಂಗಳೂರಿನ 70 ಕಡೆ ರಕ್ಷಣಾ ಕಾರ್ಯ ನಡೀತಿದೆ. ಕಾಡುಗೋಡಿಯಲ್ಲಿ ಜೋಪಡಿಯಲ್ಲಿದ್ದವರನ್ನ ರಕ್ಷಣೆ ಮಾಡಲಾಗಿದೆ. ಸಿದ್ದರಾಮಯ್ಯ ರಾಜಕೀಯ ಲಾಭ ಪಡೆಯೋ ಕೆಲಸ ಮಾಡಬಾರದು. ಕೆಲವರು ಕೋರ್ಟ್‌ಗೆ ಹೋಗಿರೋದ್ರಿಂದ ರಾಜಕಾಲುವೆ ತೆರವು ಮಾಡಲಾಗ್ತಿಲ್ಲ. ಸಿಎಂ ಬೊಮ್ಮಾಯಿ ಕೂಡ ಮೊನ್ನೆ ತಡರಾತ್ರಿವರೆಗೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ರು ಅಂತಾ ಸರ್ಕಾರದ ಬೆನ್ನಿಗೆ ನಿಂತ್ರು.. ಇದೇ ವೇಳೆ ವಿಲ್ಲಾ ನಿವಾಸಿಗಳು ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವಂತೆ ಗೃಹ ಸಚಿವರ ಬಳಿ ಅಳಲು ತೋಡಿಕೊಂಡ್ರು.

ಒಟ್ನಲ್ಲಿ ರಾಜಧಾನಿಯಲ್ಲಿ‌ನ ಜನಸಾಮಾನ್ಯರು ಮನೆ-ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ.. ಮತ್ತೊಂದು ಕಡೆ ಕೋಟ್ಯಾಧಿಪತಿಗಳು, ಐಷರಾಮಿ ವಿಲ್ಲಾಗಳು, ಹೈಟೆಕ್ ಕಾರುಗಳೆಲ್ಲಾ ಜಲಪ್ರಳಯಕ್ಕೆ ಸಿಲುಕಿ ತತ್ತರಿಸಿ ಹೋಗಿವೆ. ಸಚಿವರು, ವಿಪಕ್ಷ ನಾಯಕರು ನಾಮಕಾವಸ್ತೆ ಸಿಟಿ ರೌಂಡ್ಸ್ ಹೊಡೆಯೋದನ್ನ ಬಿಟ್ಟು, ಕೆರೆ, ರಾಜಕಾಲುವೆ ಒತ್ತುವರಿದಾರರ ವಿರುದ್ಧ ಸಮರ ಸಾರಬೇಕು. ಇಲ್ಲದಿದ್ರೆ ಇಡೀ ಬೆಂಗಳೂರಿಗೆ ಜಲಪ್ರಳಯ ಕಂಟಕ ಕಟ್ಟಿಟ್ಟಬುತ್ತಿ.

ಆನಂದ್ ನಂದಗುಡಿ ಸ್ಪೆಶಲ್ ಕರೆಸ್ಪಾಂಡೆಂಟ್ ಪವರ್ ಟಿವಿ

RELATED ARTICLES

Related Articles

TRENDING ARTICLES