Monday, November 18, 2024

ಎಲ್ಲಾ ಇಲಾಖೆಗಳಲ್ಲೂ ಕನ್ನಡ ಕಡ್ಡಾಯವಾಗಿ ಜಾರಿಯಾಗಬೇಕು

ಶಿವಮೊಗ್ಗ: ಸರ್ಕಾರಿ ಇಲಾಖೆಗಳ ಎಲ್ಲಾ ವೆಬ್‍ಸೈಟ್‍ಗಳಲ್ಲಿ ಮತ್ತು ತಂತ್ರಾಂಶಗಳಲ್ಲಿ ಕನ್ನಡ ಭಾಷೆಗೆ ಕಡ್ಡಾಯವಾಗಿ ಪ್ರಥಮ ಆದ್ಯತೆಯನ್ನು ನೀಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಕನ್ನಡ ಅನುಷ್ಟಾನ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕೆಲವು ಇಲಾಖೆಗಳ ವೆಬ್‍ಸೈಟ್‍ನಲ್ಲಿ ಮುಖಪುಟದಲ್ಲಿ ಕನ್ನಡ ಭಾಷೆ ಬಳಕೆ ಇದ್ದರೂ, ಮಾಹಿತಿಗಳು ಇಂಗ್ಲಿಷ್ ಭಾಷೆಯಲ್ಲಿವೆ. ವೆಬ್‍ಸೈಟ್‍ಗಳಲ್ಲಿ ಪ್ರತಿ ಮಾಹಿತಿ ಕೂಡಾ ಕನ್ನಡದಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಇದೇ ರೀತಿ ಸಾರ್ವಜನಿಕರಿಗೆ ಸೇವೆಯನ್ನು ಒದಗಿಸುವ ತಂತ್ರಾಂಶಗಳಲ್ಲಿ ಸಹ ಕಡ್ಡಾಯವಾಗಿ ಕನ್ನಡವನ್ನು ಅಳವಡಿಸಬೇಕು. ಜನಸಾಮಾನ್ಯರಿಗೆ ನೇರವಾಗಿ ಸೇವೆಯನ್ನು ಒದಗಿಸುವ ಇಲಾಖೆಗಳಲ್ಲಿ ಕನ್ನಡದ ಅನುಷ್ಟಾನ ಕಡ್ಡಾಯವಾಗಿ ಶೇ.100ರಷ್ಟು ಜಾರಿಯಾಗಬೇಕು ಎಂದು ತಿಳಿಸಿದ್ದಾರೆ.

ಇದೇ ರೀತಿ ಬ್ಯಾಂಕ್, ಆರ್​ಟಿಓ, ಮೆಸ್ಕಾಂ, ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕರಿಗೆ ಸೇವೆಗಳನ್ನು ಕನ್ನಡದಲ್ಲಿಯೇ ಒದಗಿಸಬೇಕು. ಇಲ್ಲಿ ಅರ್ಜಿ ನಮೂನೆಗಳು, ಚಲನ್ ಇತ್ಯಾದಿಗಳು ಕನ್ನಡದಲ್ಲಿಯೂ ಇರುವಂತೆ ಖಾತ್ರಿಪಡಿಸಬೇಕು. ಎಲ್ಲಾ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು. ಸ್ಥಳೀಯ ಸಂಸ್ಥೆಗಳು ಅಂಗಡಿಗಳಿಗೆ ಪರವಾನಿಗೆ ನೀಡುವ ಸಂದರ್ಭದಲ್ಲಿ ಇದನ್ನು ಅನುಷ್ಟಾನಗೊಳಿಸಬೇಕು ಎಂದಿದ್ದಾರೆ.

ಬಹುತೇಕ ಇಲಾಖೆಗಳು ಕನ್ನಡದಲ್ಲಿಯೇ ಸೇವೆಯನ್ನು ಒದಗಿಸುತ್ತಿದ್ದರೂ, ಸಂಪೂರ್ಣ ಅನುಷ್ಟಾನ ಇನ್ನೂ ಆಗುತ್ತಿಲ್ಲ. ವೈದ್ಯರು ನೀಡುವ ಪೋಸ್ಟ್‍ಮಾರ್ಟಂ ವರದಿ, ಬ್ಯಾಂಕ್‍ಗಳ ಪತ್ರ ವ್ಯವಹಾರ, ಸಾರ್ವಜನಿಕ ಸೇವೆಗಳು, ಔಷಧಿಗಳ ಹೆಸರು ಇತ್ಯಾದಿಗಳು ಕನ್ನಡದಲ್ಲಿ ಸಹ ಇರುವಂತೆ ನೋಡಿಕೊಳ್ಳಬೇಕು. ವಿವಿಧ ಇಲಾಖೆಗಳು ಪ್ರಕಟಿಸುವ ಟೆಂಡರ್ ಅಧಿಸೂಚನೆಗಳು ಇನ್ನೂ ಇಂಗ್ಲಿಷ್‍ನಲ್ಲಿರುವುದನ್ನು ಗಮನಿಸಲಾಗಿದೆ. ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ಟೆಂಡರ್ ಅಧಿಸೂಚನೆ ಪ್ರಕಟಿಸಬೇಕೆಂದು ಆಗ್ರಹಿಸಿದರು.

RELATED ARTICLES

Related Articles

TRENDING ARTICLES