ವಂಶಪಾರಂಪರ್ಯ ಯಜಮಾನಿಕೆಗೆ ಅಳಿವು-ಉಳಿವಿನ ಪ್ರಶ್ನೆ ಎದ್ದಿದೆ.. ಹೀಗಾಗಿಯೇ, ನರೇಂದ್ರ ಮೋದಿಯ ದೈತ್ಯಶಕ್ತಿಗೆ ಸವಾಲೆಸೆವ ಹರಸಾಹಸದ ಯಾತ್ರೆ ಶುರು ಮಾಡಿದೆ ಕೈ ಪಡೆ.. ಹೌದು, 5 ತಿಂಗಳಲ್ಲಿ 3,570 ಕಿ.ಮೀ ದೂರ ಕ್ರಮಿಸುವ ಮಹತ್ವಾಕಾಂಕ್ಷೆಯ ಯಾತ್ರೆ ಇದಾಗಿದ್ದು, ಕನ್ಯಾಕುಮಾರಿಯಿಂದ ತಿರುವನಂತಪುರ, ಕೊಚ್ಚಿ ಮಾರ್ಗವಾಗಿ ಕರ್ನಾಟಕಕ್ಕೆ ಪ್ರವೇಶ ಮಾಡಲಿದೆ. ಮೈಸೂರು, ಬಳ್ಳಾರಿ, ರಾಯಚೂರಲ್ಲಿ ಸಂಚರಿಸಿ ಮಹಾರಾಷ್ಟ್ರದತ್ತ ಪ್ರಯಾಣ ಮಾಡಲಿದೆ.
ಕನ್ಯಾಕುಮಾರಿಯಿಂದ ಕಾಂಗ್ರೆಸ್ ಪಕ್ಷದ ‘ಭಾರತ್ ಜೋಡೋ ಯಾತ್ರೆ’ಗೆ ಚಾಲನೆ ನೀಡಿದ್ದಾರೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ.. ಹೌದು, ತಮಿಳುನಾಡಿನ ಪೆರಂಬದೂರಿನಲ್ಲಿರುವ ತಮ್ಮ ತಂದೆ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸ್ಮಾರಕಕ್ಕೆ ಭೇಟಿ ನಮಸ್ಕರಿಸಿದ್ದಾರೆ..
ಕನ್ಯಾಕುಮಾರಿಯ ಮಹಾತ್ಮಗಾಂಧಿ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ರಾಹುಲ್ ಗಾಂಧಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಭಾರತ್ ಜೋಡೋ ಯಾತ್ರೆಗೆ ಚಾಲನೆ ನೀಡಿದ್ರು.
ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ವಿಷಯಗಳನ್ನಿಟ್ಟುಕೊಂಡು ಕಾಂಗ್ರೆಸ್ ಈ ಯಾತ್ರೆಯನ್ನು ಹಮ್ಮಿಕೊಂಡಿದೆ. ಅಕ್ಟೋಬರ್ 17ರಂದು ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಮುನ್ನ ಪಕ್ಷದೊಳಗೆ ಆಂತರಿಕ ಭಿನ್ನಾಭಿಪ್ರಾಯದ ಹೊತ್ತಿನಲ್ಲಿ ಈ ಯಾತ್ರೆಯನ್ನು ಹಮ್ಮಿಕೊಂಡಿರೋದು ವಿಶೇಷವಾಗಿದೆ.. 12 ರಾಜ್ಯಗಳಲ್ಲಿ 5 ತಿಂಗಳ ಕಾಲ ನಡೆಯಲಿರುವ ಈ ಯಾತ್ರೆಯ ಮೂಲಕ ದೇಶದ ಮೂಲೆ ಮೂಲೆಗಳಲ್ಲಿ ಜನರನ್ನು ತಲುಪುವುದು ಕಾಂಗ್ರೆಸ್ ಪಕ್ಷದ ಗುರಿಯಾಗಿದೆ.