ಬಿಹಾರ : ಬಿಜೆಪಿ ಬಂದ್ಮೇಲೆ, ಪ್ರಬಲ ವಿರೋಧ ಪಕ್ಷವೇ ಇಲ್ಲದಂತಾಗಿದೆ. ರಾಷ್ಟ್ರೀಯ ಪಕ್ಷ ಅಂತ ಬಿಜೆಪಿಗೆ ಸೆಡ್ಡು ಹೊಡೆದಿದ್ದ ಕಾಂಗ್ರೆಸ್ ಪದೇ ಪದೇ ತನ್ನ ಅಸ್ತಿತ್ವ ಕಳೆದುಕೊಳ್ತಿದೆ.. ಈ ಮಧ್ಯೆ, ಬಿಜೆಪಿಯೇತರ ರಾಜ್ಯಗಳ ವಿವಿಧ ಪಕ್ಷಗಳು ಹಾಗು ಬಿಜೆಪಿ ಆಡಳಿತವಿರುವ ರಾಜ್ಯಗಳ ವಿರೋಧ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಪ್ರಬಲ ಹೋರಾಟಕ್ಕೆ ಮುಂದಾಗಿದ್ದಾರೆ ನಿತೀಶ್ ಕುಮಾರ್.
ಹೌದು, 2024ರ ಲೋಕಸಭಾ ಚುನಾವಣೆಗೆ ದೇಶದ ಎಲ್ಲಾ ಪ್ರತಿಪಕ್ಷಗಳು ಸಜ್ಜಾಗುತ್ತಿವೆ. ಬಿಜೆಪಿ ವಿರುದ್ದ ಎಲ್ಲ ಪ್ರತಿಪಕ್ಷಗಳನ್ನು ಒಂದುಗೂಡಿಸುವ ಪ್ರಯತ್ನವೂ ಚುರುಕಾಗಿಯೇ ನಡೆಯುತ್ತಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಜಂಟಿಯಾಗಿ ದೇಶದ ಎಲ್ಲ ಪ್ರತಿಪಕ್ಷಗಳ ಪ್ರಮುಖರನ್ನು ಭೇಟಿ ಮಾಡುತ್ತಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನೂ ಭೇಟಿ ಮಾಡಿ, ದೇಶದಲ್ಲಿ ಜನತಾ ಪರಿವಾರ ಒಂದುಗೂಡುವ ಕಾಲ ಪಕ್ವವಾಗಿದೆ ಎನ್ನುವ ಮೂಲಕ ತೃತೀಯ ರಂಗ ರಚನೆ ಪ್ರಯತ್ನಕ್ಕೆ ಮತ್ತೆ ಚಾಲನೆ ನೀಡಿದ್ದಾರೆ.
ಬಿಜೆಪಿ ನೇತೃತ್ವದ ಎನ್ಡಿಎಗೆ ಪ್ರಬಲ ಎದುರಾಳಿಯಾಗಿ ಒಗ್ಗಟ್ಟಿನ ವಿರೋಧ ಪಕ್ಷಗಳ ಕೂಟ ರಚನೆಗೆ ಭಾರಿ ಮುತುವರ್ಜಿ ವಹಿಸಿದ್ದಾರೆ ಬಿಹಾರ ಸಿಎಂ ನಿತೀಶ್ ಕುಮಾರ್..ಬಿಹಾರದಲ್ಲಿ ಜೆಡಿಯು, ಆರ್ಜೆಡಿ ಹಾಗೂ ಕಾಂಗ್ರೆಸ್ ನೇತೃತ್ವದಲ್ಲಿ ಮೈತ್ರಿ ಸರಕಾರ ರಚಿಸಿದ ಬಳಿಕ ಇದೇ ಮೊದಲ ಬಾರಿಗೆ ನಿತೀಶ್ ಕುಮಾರ್ ರಾಹುಲ್ ಗಾಂಧಿ ಭೇಟಿ ಮಾಡಿದ್ದಾರೆ. ಬಿಜೆಪಿಗೆ ಪರ್ಯಾಯ ರಾಜಕೀಯ ಶಕ್ತಿ ರಚಿಸುವ ಕುರಿತು ಚರ್ಚಿಸಿದರು.
ಇತ್ತ, ಸಿಪಿಎಂ ಕಚೇರಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರನ್ನು ಭೇಟಿ ಮಾಡಿದ್ರು.
ಎಡಪಕ್ಷಗಳು, ಕಾಂಗ್ರೆಸ್ ಹಾಗೂ ಎಲ್ಲ ಪ್ರಾದೇಶಿಕ ಪಕ್ಷಗಳು ಒಂದಾಗಿ ಮೈತ್ರಿಕೂಟ ರಚಿಸುವ ಸಮಯ ಬಂದಿದೆ ಎಂದು ನಿತೀಶ್ ಕುಮಾರ್ ಹೇಳಿದರು.
ನಿತೀಶ್‌ಕುಮಾರ್ ಅವರು ವಿರೋಧ ಪಕ್ಷಗಳೊಂದಿಗೆ ಕೈಜೋಡಿಸಲು ನಿರ್ಧರಿಸಿರುವುದು ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ವಿರುದ್ಧದ ಹೋರಾಟಕ್ಕೆ ಬಲ ಬಂದಂತಾಗಿದೆ ಎಂದು ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ ಪ್ರತಿಕ್ರಿಯಿಸಿದರು.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 2014 ರಲ್ಲಿ ನರೇಂದ್ರ ಮೋದಿ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ರಂಗಕ್ಕೆ ಇಳಿದಿದ್ದರು. ಈಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿ ಮುಕ್ತ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ತೃತೀಯ ರಂಗ ರಚನೆಯ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಆದ್ರೆ, ಇವರ ಪ್ರಯತ್ನ ಎಷ್ಟರ ಮಟ್ಟಿಗೆ ಫಲಕೊಡುತ್ತೆ ಕಾದುನೋಡ್ಬೇಕು.