ಬೆಂಗಳೂರು: ಬೆಂಗಳೂರು ನಗರದಲ್ಲಿ ಎಂದು ಕಾಣದಂತಹ ಮಳೆಯಾಗಿದೆ. ಬೆಂಗಳೂರು ನಗರದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ಭಾಗದಲ್ಲಿ ಅತೀ ಹೆಚ್ಚು ಮಳೆಯಾಗಿದೆ. ತ್ವರಿತವಾಗಿ ಅವರ ನೆರವಿಗೆ ಬರುವ ಕೆಲಸ ಸರ್ಕಾರ ಮಾಡುತ್ತಿದೆ. ಸಾರ್ವಜನಿಕರು ಕೂಡ ಮುಂದೆ ಬಂದು ಸಹಕಾರ ಕೊಡಬೇಕು ಎಂದು ಸಚಿವ ಸಿ.ಎನ್ ಅಶ್ವತ್ಥ ನಾರಾಯಣ ಹೇಳಿದರು.
ಇಂದು ವಿಧಾನಸೌಧದಲ್ಲಿ ಮಳೆ ಹಾನಿ ವಿಚಾರವಾಗಿ ಮಾತನಾಡಿದ ಅವರು, 75 ರಿಂದ 100 ವರ್ಷಗಳಲ್ಲಿ ಕಾಣದ ಮಳೆ ಬೆಂಗಳೂರಿನಲ್ಲಿ ಆಗಿದೆ. ಈ ವರ್ಷ ಬೇಸಿಗೆ ಕಾಣದೇ ಸತತ ಮಳೆಯಾಗುತ್ತಿದೆ. ಜನರ ಸಂಕಷ್ಟ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಕೆಲಸ ಮಾಡುತ್ತಿದ್ದೇವೆ. ಸಿಎಂ ಅವರೇ ಹಾನಿ ಸ್ಥಳಕ್ಕೆ ತೆರಳಿ ಮಾಹಿತಿ ಪಡೆಯುತ್ತಿದ್ದಾರೆ.
ನಮ್ಮ ನಾಗರಿಕರಿಗೆ ಎಲ್ಲಾ ವ್ಯವಸ್ಥೆಯನ್ನು ಒದಗಿಸುತ್ತಿದ್ದೇವೆ. ಅತೀ ಹೆಚ್ಚಿನ ಮಳೆ ಬಂದಾಗ ಈ ರೀತಿಯಾಗುತ್ತದೆ. ಮುಂದೆ ಈ ರೀತಿ ಮಳೆ ಬಂದ್ರು ಹಾನಿಯಾಗದಂತೆ ಕ್ರಮ ವಹಿಸುತ್ತೇವೆ ಎಂದು ಅಶ್ವಥ್ ನಾರಾಯಣ್ ತಿಳಿಸಿದರು.
ಇನ್ನು ಕೊಟ್ಟ ಕುದುರೆ ಏರದವನು ವೀರನೂ ಅಲ್ಲ ಶೂರನೂ ಅಲ್ಲ ಎಂಬ ಡಿಕೆಶಿ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಅವರಿಗೆ ಅನ್ವಯಿಸುತ್ತದೆ. ಅರವತ್ತು ವರ್ಷಗಳ ಕಾಲ ಆಡಳಿತ ನಡೆಸಿದವರು ಈಗ ಬಾಯಿಗೆ ಬಂದ ಹಾಗೆ ಮಾತಾಡ್ತಾ ಇದಾರೆ. ನಾವು ವೀರರೂ ಹೌದು, ಶೂರರೂ ಹೌದು. ನೀವು ಕೇವಲ ನೋಡ್ತಾ ಇರಬೇಕು ಅಷ್ಟೇ ಎಂದು ಸಚಿವರು ಟಾಂಗ್ ನೀಡಿದರು.
ಇನ್ನು ಬೆಂಗಳೂರಿನಲ್ಲಿ ಮಳೆಹಾನಿ ಬಗ್ಗೆ ಯಾವ ಯಾವ ಅಕೌಂಟ್ ನಲ್ಲಿ ಟ್ವೀಟ್ ಮಾಡ್ತಿದ್ದಾರೋ ಗೊತ್ತಿಲ್ಲಾ, ಉದ್ಯಮಿಗಳು ನಮ್ಮ ಜೊತೆ ನೇರ ಸಂಪರ್ಕದಲ್ಲಿದ್ದಾರೆ. ರಾಜಕಾಲುವೆ ತೆರವುಗೊಳಿಸಿ ನೀರನ್ನ ಹರಿಸೋದಕ್ಕೆ ಎಲ್ಲಾ ಕ್ರಮ ಕೈಗೊಳ್ತಿವಿ ಎಂದರು.