ಚಾಮರಾಜನಗರ: ಕಾಮ ತಡೆಯಲಾಗದಿದ್ದರೇ ಕಾವಿ ಕಳಚಿ ಮದುವೆಯಾಗಲಿ. ಕಾವಿಯೂ ಬೇಕು ಕಾಮವೂ ಬೇಕು ಎಂದು ಕೆಲವರು ದ್ವಂದ್ವಕ್ಕೆ ಸಿಲುಕಿ ಇಂದು ಅಪಹಾಸ್ಯಕ್ಕೆ ಈಡಾಗುತ್ತಿದ್ದಾರೆ ಎಂದು ಉರಿಲಿಂಗಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿದ್ದಾರೆ.
ರಾಜ್ಯದಲ್ಲಿ ಸ್ವಾಮೀಜಿಗಳ ಮೇಲೆ ಲೈಂಗಿಕ ಆರೋಪ ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕಾವಿಯ ಹೊತ್ತು ತಿರುಗುವಿರಲ್ಲ ಕಾಮವ ಬಿಡದೇ ಎಂದು ವಚನಕಾರರು ಹೇಳಿದ್ದಾರೆ. ಅಂತರಂಗ ಶುದ್ಧಿ ಆಗಿರದಿದ್ದರೇ ಕಾವಿಗೆ ಗೌರವ ಸಿಗುವುದಿಲ್ಲ. ಈ ಹಿಂದೆ ಸಾಕಷ್ಟು ಸಂತರು, ಮಹರ್ಷಿಗಳು ಸಂಸಾರಿಗಳಾಗಿದ್ದರು. ಈ ರೀತಿ ಕರ್ಮಕಾಂಡ ಆಗಬಾರದೆಂದು ಎಲ್ಲರೂ ಸಂಸಾರಿಗಳಾಗಿದ್ದರು.
ಸಂಸಾರ ಎನ್ನುವುದು ಬಹಳ ಶ್ರೇಷ್ಠವಾದುದು, ವಿರಕ್ತ ಪರಂಪರೆ ಬಂದ ಬಳಿಕ ತ್ಯಾಗಿಗಳಾಗಿ, ಸಂಸಾರ ತ್ಯಜಿಸಿ, ಕಾವಿಧಾರಣೆ ಶುರುವಾಯಿತು. ಈಗಲೂ ಹಲವರು ಪವಿತ್ರರಾಗಿ ಸನ್ಯಾಸ ಪಾಲನೆ ಮಾಡುತ್ತಿದ್ದಾರೆ. ಕಾವಿ ಮತ್ತು ಕಾಮ ಎರಡನ್ನೂ ಇಟ್ಟುಕೊಂಡವರ ಸ್ಥಿತಿ ಹೀಗಾಗಲಿದೆ ಎಂದು ಪ್ರಸ್ತುತ ಘಟನೆ ಬಗ್ಗೆ ಸ್ವಾಮೀಜಿ ಬೇಸರ ಹೊರಹಾಕಿದರು.
ಈಗ ಯಾರು ಸನ್ಯಾಸಿಗಳೇ ಇಲ್ಲಾ, ಪ್ರಕೃತಿಗೆ ವಿರುದ್ಧವಾದುದು ಸನ್ಯಾಸತ್ವ. ಈಗ ಯಾರೂ ಭಿಕ್ಷಾಟನೆ ಮಾಡಿ ಊಟ ಮಾಡುತ್ತಾರೆ, ಯಾರೂ ಕೆರೆ-ಬಾವಿ ನೀರು ಕುಡಿಯುತ್ತಾರೆ, ಯಾರೂ ಹಾಳು ಮಂಟಪದಲ್ಲಿ ಮಲಗುತ್ತಾರೆ. ಸನ್ಯಾಸಿಗಳೇ ಈಗ ಯಾರೂ ಇಲ್ಲಾ ಎಂದು ಅಭಿಪ್ರಾಯಪಟ್ಟರು.
ಬೆಳಗಾವಿಯ ನೇಗಿನಾಳಶ್ರೀ ಆತ್ಮಹತ್ಯೆ ಬಗ್ಗೆ ಅವರು ಪ್ರತಿಕ್ರಿಯಿಸಿ, ಶರಣರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು, ಆತ್ಮಹತ್ಯೆ ಮಾಡಿಕೊಂಡರೆ ಜನರಲ್ಲಿ ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ. ಶರಣರು ಆತ್ಮಹತ್ಯೆ ಮಾಡಿಕೊಳ್ಳುವುದು ಬಹಳ ಅಪಾಯಕಾರಿ, ಅವರ ಸಾವು ನನಗೆ ನೋವು ತಂದಿದೆ.
ವಾಲ್ಮೀಕಿ ಸಮಾಜ ಪೀಠದ ಸ್ವಾಮೀಜಿ ಗಳು ಕಳೆದ ಆರೇಳು ತಿಂಗಳಿಂದ ನ್ಯಾಯಯುತ್ತ ಹೋರಾಟ ಮಾಡುತ್ತಿದ್ದಾರೆ. ಇವತ್ತು ಪ್ರಜಾಪ್ರಭುತ್ವ ಸರ್ಕಾರ ಇದಿಯಾ ಇಲ್ಲವಾ ಗೊತ್ತಾಗುತ್ತಿಲ್ಲ. ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಹೆಚ್ಚಳ ಸಂಬಂಧ ಎಸ್ಸಿ ಮತ್ತು ಎಸ್ಟಿ ಎರಡೂ ಸಮುದಾಯ ಜಂಟಿಯಾಗಿ ಹೋರಾಟ ಮಾಡಲು ತೀರ್ಮಾನ ಮಾಡಲಾಗಿದೆ. ಅ.9 ರಂದು 20 ಲಕ್ಷ ಜನ ಪ್ರತಿಭಟಿಸಲು ತೀರ್ಮಾನಿಸಿದ್ದೇವೆ. ಎಸ್ಸಿ ಎಸ್ಟಿ ಹೊಂದಾದರೆ ಯಾವ ಸರ್ಕಾರವೂ ಉಳಿಯುವುದಿಲ್ಲ. ರಾಜ್ಯದಲ್ಲಿ ಒಂದುವರೆ ಕೋಟಿ ಜನಸಂಖ್ಯೆ ಇರುವ ಎಸ್ಸಿ ಎಸ್ಟಿ ಸಮಾಜದ ಹೋರಾಟಕ್ಕೆ ಬೆಲೆ ಇಲ್ಲ. ಇದು ಮುಂದಿನ ಚುನಾವಣೆಯಲ್ಲಿ ಗೊತ್ತಾಗುತ್ತದೆ, ಇದರ ಶಕ್ತಿ ಏನು ಎಂಬುವುದು ಎಂದು ಉರಿಲಿಂಗಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ತಿಳಿಸಿದರು.