ಬೆಂಗಳೂರು: ಆಗಸ್ಟ್ 31 ರ ರಾತ್ರಿ ಬೆಂಗಳೂರಿನಲ್ಲಿ ಬಹಳ ಮಳೆ ಆಗಿತ್ತು. ಆದ್ರೆ ಹೆಚ್ಚೇನು ಹಾನಿ ಆಗಿರಲಿಲ್ಲ. ಆದ್ರೇ ನಿನ್ನೆ ಸುರಿದ ಮಳೆಯಿಂದ ಬಹಳಷ್ಟು ಹಾನಿಯಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಳೆ ಅವಾಂತರ ಬಗ್ಗೆ ಮಾತನಾಡಿದ ಅವರು, ಬೊಮ್ಮನಹಳ್ಳಿ, ಮಹಾದೇವ ಪುರದಲ್ಲಿ ಈಸ್ಟ್ ಝೋನ್ ನಲ್ಲಿ ಹೆಚ್ಚಿನ ಮಳೆ ಆಗಿದೆ. 1998 ಹೊರತು ಪಡಿಸಿದ್ರೆ ಇದು ಅತೀ ಹೆಚ್ಚು ಮಳೆ ಬಂದಿದೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ 330mm ಮಳೆ ಆಗಬೇಕಿತ್ತು, ನಿನ್ನೆ 709mm ಮಳೆ ಆಗಿದೆ. ಇನ್ನು ಸೆಪ್ಟೆಂಬರ್ ತಿಂಗಳು ಇದಕ್ಕೆ ಸೇರ್ಪಡೆಯಾಗಿಲ್ಲ. 1998ರಲ್ಲಿ 725mm ಮಳೆ ಆಗಿತ್ತು. ಇದು ಎರಡನೇ ಅತ್ಯಧಿಕ ಮಳೆ ಎಂದರು.
ಇನ್ನು ಮಹಾದೇವ ಪುರದಲ್ಲಿ 28 ಕಡೆಗಳಲ್ಲಿ ನೀರು ನುಗ್ಗಿದೆ. ಬೊಮ್ಮನಹಳ್ಳಿ 9 ಕಡೆಗೆ ನೀರು ನುಗ್ಗಿ ಹಾನಿಯಾಗಿದೆ. ಈಸ್ಟ್ ಝೋನ್ ನಲ್ಲಿ 24 ಕಡೆ ತೊಂದರೆಯುಂಟಾಗಿದೆ. ಆದ್ರೇ ಬಹಳ ಬೇಗ ಬೇರೆ ಕಡೆಗೆ ನೀರು ನುಗ್ಗಿದ ಜಾಗಗಳು ಕ್ಲಿಯರ್ ಆಗಿದೆ. ಈಸ್ಟ್ ಝೋನ್ ಪರಿಸ್ಥಿತಿ ಸದ್ಯ ಹತೋಟಿಯಲ್ಲಿ ಇದೆ, ಕೋರ ಮಂಗಲ 16, ಈಜೀಪುರ 24 ದೂರು ಬಂದಿವೆ. ಈಗಲೂ ಹಲವು ಭಾಗಗಳಲ್ಲಿ ನೀರುನಿಂತು ಸಮಸ್ಯೆಯಾಗಿದೆ ನಾನು ಬಹಳಷ್ಟು ಕಡೆ ಭೇಟಿ ನೀಡಿ ಬಂದಿದ್ದೀನಿ ಎಂದು ತುಷಾರ್ ಗಿರಿನಾಥ್ ತಿಳಿಸಿದರು.
ಇನ್ನು ಅಲ್ಲಿರುವ ನೀರು ಕ್ಲಿಯರ್ ಮಾಡಲು ಕ್ರಮ ಕೈಗೊಂಡಿದ್ದೇವೆ. 44 ಪಂಪ್ ಗಳಿಂದ ನೀರು ಹೊರ ಹಾಕುವ ಕೆಲಸ ಮಾಡುತ್ತಿದ್ದೇವೆ. ರಕ್ಷಣೆ ಕಾರ್ಯಚಾರಣೆ ನಡೆಯುತ್ತಿದ್ದು ಬೋಟ್ ಗಳ ಸಹಾಯದಿಂದ ಜನರಿಗೆ ರಕ್ಷಣೆ ನೀಡಲಾಗುತ್ತಿದೆ. ಈಜೀಪುರದ ಔಟರ್ ರಿಂಗ್ ರೋಡ್ ನಲ್ಲಿ ಇನ್ನು ಎರಡು ಅಡಿಗಳಷ್ಟು ನೀರು ನಿಂತಿದೆ. ಸಾವಳಕೆರೆಯ ಹೊರ ಹರಿವು ಇಕೋ ಸ್ಪೇಸ್ ಮುಂಭಾಗ ಬರ್ತಾ ಇದೆ. ನಾವು ನೀರನ್ನು ಡೈವರ್ಟ್ ಮಾಡಿದ್ದೇವೆ ಆದ್ರೇ ಕೆರೆ ತುಂಬಿರೋದ್ರಿಂದ ಹೊರ ಹರಿವು ಕಂಟ್ರೋಲ್ ಮಾಡಲು ಆಗ್ತಾ ಇಲ್ಲ ಎಂದರು.