Friday, December 27, 2024

ವರ್ಷಕ್ಕೆ 7 ದಿನ ಮಾತ್ರ ತೆಗೆಯಲಾಗುವ ದೇಗುಲ

ಕಾರವಾರ: ಸಾಮಾನ್ಯವಾಗಿ ದೇವಸ್ಥಾನ ಅಂದ್ರೆ ಅಲ್ಲಿ ಪ್ರತಿನಿತ್ಯ ತ್ರಿಕಾಲ ಪೂಜೆ, ಭಕ್ತರಿಗೆ ದರ್ಶನ, ಇನ್ನೂ ವಿವಿಧ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿರುತ್ತದೆ. ಆದ್ರೆ ವರ್ಷವಿಡೀ ದೇವಸ್ಥಾನದ ಬಾಗಿಲು ಮುಚ್ಚಿ ವರ್ಷದಲ್ಲಿ ಕೇವಲ ಏಳು ದಿನ ಮಾತ್ರ ಭಕ್ತರಿಗೆ ದರ್ಶನ ನೀಡುವ ದೇವಾಲಯದ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೋಣ ಗ್ರಾಮದಲ್ಲಿ ಇದೆ.

ಹೌದು ಹುನಕೋಣ ಗ್ರಾಮದ ಸಾತೇರಿ ಅನ್ನೋ ದೇವಸ್ಥಾನದಲ್ಲಿ ದೇವಿಯ ದರ್ಶನಕ್ಕೆ ವರ್ಷದಲ್ಲಿ ಏಳು ದಿನ ಮಾತ್ರ ಅವಕಾಶ ಮಾಡಿಕೊಡಲಾಗುತ್ತದೆ. ಸಾತೇರಿದೇವಿ ತನ್ನ ಜಾತ್ರಾ ಮಹೋತ್ಸವದಲ್ಲಿ ಮಾತ್ರ ಭಕ್ತರಿಗೆ ದರ್ಶನವನ್ನ ಕೊಡುವ ಪ್ರತೀತಿ ಸಹ ಇದೆ. ಹೀಗಾಗಿ ಕಳೆದೆರಡು ದಿನಗಳಿಂದ ದೇವಿಯ ಜಾತ್ರಾಮಹೋತ್ಸವ ಪ್ರಾರಂಭವಾಗಿದ್ದು ಇಂದಿನಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಹಲವೆಡೆಗಳಿಂದ ಆಗಮಿಸಿದ್ದ ಭಕ್ತರು ಸಾತೇರಿ ದೇವಿಗೆ ವಿವಿಧ ಸೇವೆಗಳನ್ನ ಅರ್ಪಿಸಿ ದರ್ಶನ ಪಡೆದುಕೊಂಡರು.

ಇನ್ನು ಜಾತ್ರಾ ಮಹೋತ್ಸವದ ಮೊದಲೆರಡು ದಿನ ದೇವಸ್ಥಾನದ ಅರ್ಚಕ ಕುಟುಂಬದವರಿಗೆ ಹಾಗೂ ಗ್ರಾಮಸ್ಥರಿಗೆ ಮಾತ್ರ ದೇವಿ ದರ್ಶನದ ಅವಕಾಶ ಮಾಡಿಕೊಡಲಾಗುತ್ತದೆ. ಬಳಿಕ ಉಳಿದ ಐದು ದಿನಗಳು ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಮುಕ್ತವಾಗಿರುತ್ತದೆ. ವರ್ಷದ ಉಳಿದ ದಿನಗಳಲ್ಲಿ ದೇವಸ್ಥಾನದಲ್ಲಿ ಪ್ರತಿ ಸೋಮವಾರ ಗರ್ಭಗುಡಿಯ ಬಾಗಿಲಲ್ಲಿಯೇ ನಿಂತು ಪೂಜೆ ಸಲ್ಲಿಸಿ ತೆರಳಲಾಗುತ್ತದೆ. ಇಂದು ಸಾರ್ವಜನಿಕ ದರ್ಶನದ ಮೊದಲ ದಿನವಾಗಿದ್ದು ಸಾವಿರಾರು ಮಂದಿ ಆಗಮಿಸಿ ದರ್ಶನ ಪಡೆದುಕೊಂಡರು.

ಹಣಕೋಣದಲ್ಲಿರುವ ಸಾತೇರಿ ದೇವಿ ತನ್ನ ಭಕ್ತರ ಕಷ್ಟಗಳನ್ನು ನಿವಾರಿಸಿ, ಸಹಾಯ ಸಹಕಾರದ ಅಗತ್ಯವಿದ್ದರೆ ಭಕ್ತರ ಸಮ್ಮುಖದಲ್ಲಿ ಪ್ರತ್ಯಕ್ಷಳಾಗಿ ಕಷ್ಟಗಳನ್ನ ನಿವಾರಿಸುತ್ತಿದ್ದಳಂತೆ. ಒಮ್ಮೆ ದೇವಿ ಬಾವಿಯ ಪಕ್ಕದಲ್ಲಿ ಸ್ನಾನ ಮಾಡಿ ಕೂದಲನ್ನ ಬಾಚಿಕೊಳ್ಳುವಾಗ ಒಬ್ಬ ದುಷ್ಟನ ಕಣ್ಣು ದೇವಿಯ ಮೇಲೆ ಬಿದ್ದು ದೇವಿಯ ಬಳಿ ಬಂದಾಗ ಆಕೆ ರಕ್ಷಣೆಗಾಗಿ ಬಾವಿಗೆ ಹಾರಿ ಅದೃಶ್ಯಳಾದಳಂತೆ. ಬಳಿಕ ಊರಿನ ಹಿರಿಯನೊಬ್ಬನಿಗೆ ದೇವಿ ಕನಸಿನಲ್ಲಿ ಬಂದು ತಾನು ಬಾವಿಯಲ್ಲಿ ಅದೃಶ್ಯಳಾಗಿದ್ದು ತಾನು ನೆಲೆಸಿರುವ ಸ್ಥಳದಲ್ಲೇ ಸಣ್ಣ ಗುಡಿಯೊಂದನ್ನು ಕಟ್ಟಿಕೊಡುವಂತೆ ಹೇಳಿ ವರ್ಷದಲ್ಲಿ 7 ದಿನಗಳ ಕಾಲ ಮಾತ್ರ ತನ್ನ ದರ್ಶನ ನೀಡುವುದಾಗಿ ತಿಳಿಸಿದ್ದಳಂತೆ. ಅದರಂತೆ ನಂತರದ ದಿನಗಳಲ್ಲಿ ಈ ಜಾಗದಲ್ಲಿ ಚಿಕ್ಕ ಗುಡಿ ಕಟ್ಟಲಾಯಿತು.

ಈ ದೇವಿಯ ಪೋಟೋ ಮಾರಾಟ ಮಾಡುವುದಾಗಲಿ, ಮೊಬೈಲ್, ಕ್ಯಾಮೆರಾಗಳಲ್ಲಿ ಚಿತ್ರಿಸಿಕೊಳ್ಳುವುದಕ್ಕಾಗಲೀ ದೇವಸ್ಥಾನದಲ್ಲಿ ಅವಕಾಶವಿರುವುದಿಲ್ಲ. ಹಾಗೇನಾದರೂ ಮಾಡಿದಲ್ಲಿ ಅಂತಹವರಿಗೆ ಕೆಟ್ಟದ್ದಾಗುತ್ತದೆ ಅನ್ನೋ ನಂಬಿಕೆ ಭಕ್ತರದ್ದು. ಹೀಗಾಗಿ ದೇವರನ್ನ ನೋಡಬೇಕಾದರೆ ವರ್ಷದಲ್ಲಿ ಏಳು ದಿನ ಮಾತ್ರ ಅವಕಾಶ ಸಿಗುವುದರಿಂದ ವಿವಿಧೆಡೆಯಿಂದ ಬಂದ ಭಕ್ತರು ದೇವಿಯ ದರ್ಶನವನ್ನ ಪಡೆದುಕೊಳ್ಳುತ್ತಾರೆ.

ಈ ಬಾರಿ ಸಹ ಸಾತೇರಿ ದೇವಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಪ್ರಾರಂಭವಾಗಿದ್ದು ದೇವಿಯ ದರ್ಶನವನ್ನ ಪಡೆಯುವುದಕ್ಕೆ ಇನ್ನೂ ನಾಲ್ಕು ದಿನಗಳ ಕಾಲಾವಕಾಶವಿದೆ ಎಂದು ದೇವಿಯ ಆಡಳಿತ ಮಂಡಳಿ ತಿಳಿಸಿದೆ.

RELATED ARTICLES

Related Articles

TRENDING ARTICLES