ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಸಮರ್ಥ ಆಡಳಿತದ ಪರಿಣಾಮವಾಗಿ ಸುರಿಯುತ್ತಿರುವ ಮಳೆಗೆ ಇಡೀ ಬೆಂಗಳೂರು ಅವ್ಯವಸ್ಥೆಯ ಆಗರವಾಗಿದೆ. ಮೂಲಸೌಕರ್ಯಗಳ ಕೊರತೆಯಿಂದ ಬೆಂಗಳೂರು ಅಕ್ಷರಶಃ ನಲುಗಿಹೋಗಿದೆ. ಬಿಜೆಪಿ ಮಾತ್ರ ದ್ವೇಷ ಮತ್ತು ಹಿಂಸೆ ರಾಜಕಾರಣ ಬಿಟ್ಟು ಮೂಲಸೌಕರ್ಯಗಳ ಕಡೆ ಗಮನ ನೀಡಬೇಕು. ಇನ್ನಾದರೂ ರಾಜ್ಯ ಸರ್ಕಾರ ತಮ್ಮ ಕುಂಭಕರ್ಣ ನಿದ್ದೆಯಿಂದ ಎಚ್ಚರಗೊಂಡು ಜನತೆಯ ಕಷ್ಟಕ್ಕೆ ಸ್ಪಂದಿಸುತ್ತಾರಾ ಎಂದು ರಾಜ್ಯ ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದೆ.
ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಅಕ್ಷರಸಃ ಬೆಂಗಳೂರು ನಲುಗಿ ಹೋಗಿದೆ ಈ ಬಗ್ಗೆ ರಾಜ್ಯ ಕಾಂಗ್ರೆಸ್ ಟ್ವಿಟ್ ಮಾಡಿ, ಬೆಂಗಳೂರು ಮುಳುಗಿರುವುದು ಮಳೆಯಲ್ಲಲ್ಲ. ಬಿಜೆಪಿಯ 40% ಕಮಿಷನ್ ಭ್ರಷ್ಟಾಚಾರದಲ್ಲಿ. ಹಲವು ತಿಂಗಳ ಹಿಂದೆ ಬಿಜೆಪಿ ನಾಯಕ ಎಸ್ಎಂ ಕೃಷ್ಣ ಬೆಂಗಳೂರಿನ ದುರಾವಸ್ಥೆಯ ಬಗ್ಗೆ ಧ್ವನಿ ಎತ್ತಿದ್ದರು. ಹಲವು ಉದ್ಯಮಿಗಳು ಆಕ್ರೋಶ ವ್ಯಕ್ತಪಡಿಸಿದರು, ಈಗ ಐಟಿ ಕಂಪೆನಿಗಳು ಪತ್ರ ಬರೆದಿವೆ. ಬೆಂಗಳೂರಿನ ಎಲ್ಲಾ ಸಚಿವರು ನಾಪತ್ತೆಯಾಗಿದ್ದಾರೆ. ಬಿಜೆಪಿ ‘ಜನೋತ್ಸವ’ದ ತಯಾರಿಯಲ್ಲಿದ್ದಾರೆ.
ಇನ್ನು ಬೆಂಗಳೂರಿನ ನಗರವನ್ನು ಪ್ರತಿನಿಧಿಸುವ 7 ಸಚಿವರು ಜಟ್ಕಾ ಕಟ್, ಹಲಾಲ್ ಕಟ್ ವಿಚಾರ ಮಾತಾಡಲು ಓಡೋಡಿ ಬರ್ತಾರೆ. ಸಾವರ್ಕರ್ ವಿಚಾರ ಮಾತಾಡಲು ಮುನ್ನುಗ್ಗುತ್ತಾರೆ. ಆದರೆ, ಬೆಂಗಳೂರು ಮಳೆ ಅವಾಂತರಕ್ಕೆ ಮಾತ್ರ ಬಾಯಿ ಬಿಡದೆ ಬಿಲ ಸೇರಿಕೊಂಡಿದ್ದೇಕೆ, ಬೆಂಗಳೂರಿನ ಬಗ್ಗೆ ಮಾತಾಡಲೂ ಸಹ ಸಚಿವರಿಗೆ 40% ಕಮಿಷನ್ ಕೊಡಬೇಕೆ ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.