Tuesday, May 21, 2024

ರಾತ್ರಿ ಸುರಿದ ಮಳೆಗೆ ಗಡಿಜಿಲ್ಲೆ ತತ್ತರ : ಗ್ರಾಮಗಳು ಜಲಾವೃತ

ಚಾಮರಾಜನಗರ : ಭಾನುವಾರ ಸಂಜೆಯಿಂದ ಇಂದು ಮುಂಜಾನೆವತೆಗೂ ಸುರಿದ ಜೋರು ಮಳೆಗೆ ಗಡಿಜಿಲ್ಲೆ ಚಾಮರಾಜನಗರ ತತ್ತರಿಸಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮ ತಡರಾತ್ರಿ ಜಲಾವೃತವಾಗಿದ್ದು ಜನರ ಪಾಡು ಹೇಳತೀರಾಗಿದೆ. ಇಡೀ ಗ್ರಾಮದ ಮುಖ್ಯರಸ್ತೆಗಳೆಲ್ಲಾ ಜಲಮಯವಾಗಿದ್ದು ಗ್ರಾಮದ ಸಂಪರ್ಕ ಬಂದ್ ಆಗಿದೆ‌. ಇಡೀ ರಾತ್ರಿ ಜನರು ನಿದ್ರೆ ಮಾಡಲಾಗದೇ ದೇವರನ್ನು ನೆನೆದು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಇನ್ನು, ಚಾಮರಾಜನಗರ ತಾಲೂಕಿನ ಹರದನಹಳ್ಳಿ ಕೆರೆ ತುಂಬಿ ಕೋಡಿಬಿದ್ದಿರುವ ಹಿನ್ನೆಲೆಯಲ್ಲಿ ದೊಡ್ಡಮೋಳೆ, ಕೃಷಿ ವಿಜ್ಞಾನ ಕೇಂದ್ರ,ಚಂದುಕಟ್ಟೆ ಮೋಳೆ ಗ್ರಾಮಕ್ಕೆ ನೀರು ನುಗ್ಗಿದ್ದು ರಸ್ತೆ ಮೇಲೆಲ್ಲಾ ನೀರು ಹರಿಯುತ್ತಿರುವುದರಿಂದ ಸಂಪರ್ಕ ಬಂದ್ದಾಗಿದೆ.

ಇನ್ನು, ಹನೂರು ತಾಲೂಕಿನ ಹುಬ್ಬೆಹುಣಸೆ ಜಲಾಶಯ ತುಂಬಿದ್ದು ತಟ್ಟೆಹಳ್ಳ ಎಂಬುದರ ಮೂಲಕ ಹರಿದು ಹೋಗುತ್ತಿದ್ದು ಹಳ್ಳ ದಾಟದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಜಿಲ್ಲಾ ಕೇಂದ್ರದ ಜಿಲ್ಲಾಡಳಿತ ಭವನದ ರಸ್ತೆಯೂ ಸಹ ಸಂಪೂರ್ಣ ಜಲಾವೃತವಾಗಿದ್ದು, ಅಧಿಕಾರಿಗಳ ವಿರುದ್ಧ ಜನರು ಕಿಡಿಕಾರುವಂತ್ತಾಗಿದೆ. ಇಡೀ ಜಿಲ್ಲೆ ಮಳೆಗೆ ತತ್ತರಿಸಿದ್ದು ಬೆಳ್ಳಂಬೆಳಗ್ಗೆಯೇ ಜನರ ನೆಮ್ಮದಿಯನ್ನು ಮಳೆರಾಯ ಕಸಿದಿದ್ದಾನೆ.

RELATED ARTICLES

Related Articles

TRENDING ARTICLES