Monday, December 23, 2024

ಮಳೆ, ರಸ್ತೆ ಅವ್ಯವಸ್ಥೆಗೆ ಐಟಿ ಕಂಪನಿಗಳು ಅಸಮಾಧಾನ..!

ಬೆಂಗಳೂರು : ಅಂತಾರಾಷ್ಟ್ರೀಯ ಮಟ್ಟದಲ್ಲಿ ಐಟಿ ಕ್ಷೇತ್ರದಲ್ಲಿ ಪ್ರಖ್ಯಾತಿ ಹೊಂದಿದ್ದ ಬ್ರ್ಯಾಂಡ್ ಬೆಂಗಳೂರು ಹೆಸರು ಇದೀಗ ಮಾಯವಾಗೋ ಲಕ್ಷಣ ಕಾಣ್ತಿದೆ. ಐಟಿ ಹಬ್‌ಗಳು, ವಿದೇಶಿ ಹೂಡಿಕೆದಾರರು ಬೆಂಗಳೂರಿನತ್ತ ಆಕರ್ಷಿತರಾಗಿ ಹೂಡಿಕೆ ಮಾಡ್ತಿದ್ರು. ಆದ್ರೆ ಸದ್ಯದ ಪರಿಸ್ಥಿತಿ ಬೆಂಗಳೂರಿನ ಮಾನ-ಮರ್ಯಾದೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುವಂತೆ ಮಾಡಿದೆ.

ಬೆಂಗ್ಳೂರಿನ ಯಮ ಸ್ವರೂಪಿ ರಸ್ತೆ ಗುಂಡಿಗಳಿಗೆ ಅದೆಷ್ಟು ಜನ ಬಲಿಯಾಗಿದ್ದಾರೆ. ಒಂದೇ ಒಂದು ಸಣ್ಣ ಮಳೆಗೆ ಬೆಂಗಳೂರಿನ ರಸ್ತೆಗಳು ಕಿತ್ತು ಹೋಗಿ ಕೆರೆಯಂತಾಗುತ್ತಿವೆ. ಸಾರ್ವಜನಿಕರು ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಹಿಡಿ ಶಾಪ ಹಾಕ್ತಿದ್ರು. ಆದ್ರೆ ಇದೀಗ ಸಾರ್ವಜನಿಕರ ಬದಲಾಗಿ ಸರ್ಕಾರಕ್ಕೆ ಐಟಿ ಕಂಪನಿಗಳೇ ಛೀಮಾರಿ ಹಾಕ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿಗೆ ಪತ್ರ ಬರೆದ ಹೊರ ವರ್ತುಲ ರಸ್ತೆ‌ ಸಂಘ ಎಚ್ಚರಿಕೆ ನೀಡಿದೆ.

ರೇಷ್ಮೆ ಮಂಡಳಿ ಜಂಕ್ಷನ್‌ನಿಂದ ಕೆ.ಆರ್.ಪುರ ಜಂಕ್ಷನ್​ವರೆಗಿನ 17 ಕಿಲೋ ಮೀಟರ್ ಹೊರ ವರ್ತುಲ ರಸ್ತೆ ಇಕ್ಕೆಲಗಳಲ್ಲಿ ಹಲವು ಐಟಿ ಕಂಪನಿಗಳಿವೆ. ಈ ಕಂಪನಿಗಳಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಕೆಲಸ ಮಾಡ್ತಿದ್ದಾರೆ. ರಾಜ್ಯಕ್ಕೆ ವಾರ್ಪಿಕ 22 ಬಿಲಿಯನ್ ಡಾಲರ್ ಆದಾಯ ಬರುತ್ತಿದೆ. ಬೆಂಗಳೂರಿಗೆ ಶೇಕಡಾ 32ರಷ್ಟು ತೆರಿಗೆ ಪಾವತಿಸುತ್ತಿವೆ. ಆದ್ರೆ, ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡ್ತಿದ್ದಾರೆ. ಆಗಸ್ಟ್ 30ರಂದು ಸುರಿದ ಮಳೆಯಿಂದ 255 ಕೋಟಿ ರೂಪಾಯಿ ನಷ್ಟವಾಗಿದೆ. ಅಂದು ಬಹುತೇಕ ಐಟಿ ಕಂಪನಿಗಳ ಉದ್ಯೋಗಿಗಳು ಸುಮಾರು 5 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್‌ನಲ್ಲಿ ಸಿಲುಕಿದ್ರು. ವಿದೇಶಿ ಕಂಪನಿಗಳು ಹೂಡಿಕೆ ಮಾಡಿದ ಬಂಡವಾಳ ಹಿಂಪಡೆಯುವ ಸಾಧ್ಯತೆ ಇದೆ ಎಂದು ಸರ್ಕಾರಕ್ಕೆ ಪತ್ರ ಬರೆದು ಹೊರವರ್ತುಲ ರಸ್ತೆಗಳ ಕಂಪನಿ ಸಂಘ ಎಚ್ಚರಿಕೆ ನೀಡಿದೆ.

ಐಟಿ ಕಂಪನಿ ಬೇಡಿಕೆಗಳೇನು..?

ಕೆ.ಆರ್.ಪುರಂ, ಸಿಲ್ಕ್ ಬೋರ್ಡ್ ಜಂಕ್ಷನ್ ಸುಧಾರಣೆ ಮಾಡಬೇಕು
ಬಿಎಂಟಿಸಿಯ ವೋಲ್ವೋ ಮತ್ತು ವಿದ್ಯುತ್ ಚಾಲಿತ ಬಸ್ ಬಿಡಬೇಕು
ರಸ್ತೆ ಬದಿಗಳಲ್ಲಿ ಪಾರ್ಕಿಂಗ್ ನಿಷೇಧ ಮಾಡಬೇಕು
ಪಾದಾಚಾರಿ ಮಾರ್ಗ ಮತ್ತು ಸೈಕಲ್ ಮಾರ್ಗ ನಿರ್ಮಿಸಬೇಕು
ಪ್ರತಿ 500 ಮೀಟರ್‌ಗೊಂದು ಪಾದಾಚಾರಿ ಮೇಲ್ಸೇತುವೆ ನಿರ್ಮಿಸಬೇಕು
ರಸ್ತೆ, ಪಾದಾಚಾರಿ ಮಾರ್ಗದ ಅಕ್ರಮ ಒತ್ತುವರಿ ತೆರವುಗೊಳಿಸಬೇಕು
ಖಾಸಗಿ ಕಂಪನಿಗಳ ಬಸ್ ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು

ಸರ್ಕಾರ ಈಗಲಾದರೂ ಎಚ್ಚೆತ್ತು ಗಾರ್ಡನ್ ಸಿಟಿಯ ಮೂಲಭೂತ ಸಮಸ್ಯೆ ಬಗೆಹರಿಸದ್ದಿದ್ರೆ ಅಂತರಾಷ್ಟ್ರೀಯ ಕಂಪನಿಗಳು ಬೆಂಗಳೂರಿಗೆ ಗುಡ್ ಬೈ ಹೇಳೋದು ನಿಶ್ಚಿತವಾಗಿದೆ. MNC ಕಂಪನಿಗಳು ಬಹಿರಂಗ ಪತ್ರ ಬರೆದು, ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡ್ರು, ಸರಕಾರ ಮಾತ್ರ ತಲೆ ಕೆಡಿಸಿಕೊಳ್ಳೋದೆ ಇರೋದು ವಿರ್ಪಯಾಸ. ಇನ್ನಾದ್ರೂ ಎಚ್ಚೆತ್ತು ಬ್ರ್ಯಾಂಡ್ ಬೆಂಗಳೂರು ಗೌರವವನ್ನ ಕಾಪಾಡುತ್ತಾ ಕಾದು ನೋಡಬೇಕಿದೆ.

ಗೋವಿಂದ್, ಪೊಲಿಟಿಕಲ್ ಬ್ಯುರೋ,ಪವರ್ ಟಿವಿ

RELATED ARTICLES

Related Articles

TRENDING ARTICLES