ಮೈಸೂರು : ಪೀಠಾಧಿಪತಿಗಳು ಬಹುತೇಕರು ಬ್ರಹ್ಮಚಾರಿಗಳ ವೇಷದಲ್ಲಿದ್ದಾರೆ. ನಮ್ಮಲ್ಲಿ ಸಂಸಾರಿಗಳೇ ಸ್ವಾಮೀಗಳಾಗಿದ್ದಾರೆ. ಸಂಸಾರಿಗಳೇ ಸ್ವಾಮೀಗಳಾಗಲಿ. ಮುರುಘ ಶರಣರ ಪ್ರಕರಣದಲ್ಲಿ ಸಾಕ್ಷ್ಯ ನಾಶವಾಗಿ ಹೋಗಿದೆ. ಮಕ್ಕಳ ಹಾಸ್ಟೆಲ್ ಬೆಡ್ ಶೀಟ್ ಎಲ್ಲಾ ಬದಲಾಗಿದೆ ಎಂದು ಮೈಸೂರಿನಲ್ಲಿ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಆರೋಪ ಮಾಡಿದರು.
ಪ್ರಕರಣ ಸಂಬಂಧ ಎಸ್.ಪಿ ಅಮಾನತು ಆಗಬೇಕು ಎಂದು ಸ್ವಾಮೀಜಿ ಪರ ಮಾತನಾಡಿದ ಮಂತ್ರಿಗಳ ವಿರುದ್ದ ವಿಶ್ವನಾಥ್ ವಾಗ್ದಾಳಿ ಮಾಡಿದರು. ಮಂತ್ರಿಗಳಿಗೆ ತಲೆ ಇದೆಯಾ? ಇವರೇನು ಜಡ್ಜ್‌ಗಳ. ಮಾಜಿ ಸ್ವಾಮೀಜಿಗಳ ವಿರುದ್ದ ಪೋಕ್ಸೋ ಕಾಯ್ದೆ ದಾಖಲಾಗಿದೆ. ಅವರ ಪರ ಮಾತನಾಡುವುದನ್ನು ಬಂದ್ ಮಾಡಿ. ಮಾಜಿ ಸ್ವಾಮೀಗಳ ಪರ ಮಾತನಾಡಬೇಡಿ. ಈ ಬಗ್ಗೆ ಕೇಂದ್ರದ ನಾಯಕರು ಸೂಚನೆ ನೀಡಿದ್ದಾರೆ.
ಸ್ವಾಮೀಜಿ ಮಠದ ಕುಲಕ್ಕೆ ಅವಮಾನ. ಮುಂದೆ ಸಂಸಾರಿಗಳೇ ಮಠಾಧೀಶರಾಗಲಿ. ಮದುವೆಯಾಗದವರು ಬಂದು ಮಾಡಿರೋದನ್ನು ನಾವು ನೋಡಿದ್ದೇವೆ. ನಮ್ಮಲ್ಲಿ ಸಾಕಷ್ಟು ಪೀಠಾಧಿಪತಿಗಳಿದ್ದಾರೆ ಆದರೆ ಬ್ರಹ್ಮಚಾರಿಗಳಿಲ್ಲ ಎಂದು ಹೇಳಿದರು. ಸರ್ಕಾರ ಸಹಾ ಈ ಬಗ್ಗೆ ಗಮನಹರಿಸಬೇಕು. ಸರ್ಕಾರ ಮಠಕ್ಕೆ ಹಣ ಕೊಟ್ಟಿದ್ದು ಇದಕ್ಕೇನಾ ಎಂದು ಪ್ರಶ್ನಿಸಿದರು. ಅಪ್ರಾಪ್ತ ಮಕ್ಕಳು ಸುಳ್ಳು ಹೇಳುವುದಿಲ್ಲ. ಮಕ್ಕಳು ಅಮಾಯಕರು ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಸ್ವಾಮಿಜಿಯಿಂದ ಆಗಿರುವ ಕಳಂಕವನ್ನು ತೊಳೆದುಕೊಳ್ಳಬೇಕು ಎಂದರು.