ಬೆಂಗಳೂರು : ಹಾಡಹಗಲೇ ಖದೀಮನೋರ್ವ ಚಿನ್ನದ ಅಂಗಡಿಗೆ ಕನ್ನ ಹಾಕಿದ್ದಾನೆ. ಸ್ಮಾರ್ಟ್ ಆಗಿ ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನದಂಗಡಿಯಲ್ಲಿ ಕಳ್ಳತನ ಮಾಡಿದ್ದಾನೆ. ಬೆಂಗಳೂರಿನ ಜಯನಗರದ 8ನೇ ಬ್ಲಾಕ್ನಲ್ಲಿ ಈ ಘಟನೆ ನಡೆದಿದೆ. ಆರೋಪಿ ರಾಹುಲ್ ಕಮಕಲಾಲ್ನ ಜ್ಯುವೆಲರಿ ಶಾಪ್ಗೆ ಬಂದಿದ್ದಾನೆ. ತಾನು ಅಪೋಲೋ ಆಸ್ಪತ್ರೆಯಲ್ಲಿ ವೈದ್ಯನೆಂದು ಪರಿಚಯ ಮಾಡಿಕೊಂಡಿದ್ದ ಖದೀಮ ಅಂಗಡಿಯಲ್ಲಿ ಬೆಳ್ಳಿನಾಣ್ಯ ಖರೀದಿಸಿದ್ದಾನೆ.
ಬಳಿಕ ತನ್ನ ತಂಗಿ ಮದುವೆಗೆ ಚಿನ್ನಬೇಕೆಂದ ಆರೋಪಿ 32 ಗ್ರಾಂ ತೂಕದ ಚಿನ್ನದ ನೆಕ್ಲೆಸ್, 75 ಗ್ರಾಂ ತೂಕದ ಲಾಂಗ್ ಚೈನ್, 22 ಗ್ರಾಂ ತೂಕದ ಬ್ರೇಸ್ಲೈಟ್ ಖರೀದಿ ಮಾಡಿದ್ದಾನೆ. ಬಳಿಕ ತನ್ನ ಸಂಬಂಧಿಕರು ಹಣ ತರುತ್ತಾರೆಂದು ನಂಬಿಸಿದ ರಾಹುಲ್ ಸುಮಾರು 2 ಗಂಟೆಗಳ ಕಾಲ ಅಂಗಡಿಯಲ್ಲಿ ಕಾಲ ಕಳೆದಿದ್ದಾನೆ.
ನಂತರ ಬೆಳ್ಳಿಯ ಫೋಟೋ ಫ್ರೇಮ್ ಬೇಕೆಂದು ಆರೋಪಿ ಕೇಳಿದ್ದಾನೆ. ಫ್ರೇಮ್ ತರಲು ಕಮಕಲಾಲ್ ಒಳಗೆ ಹೋದಾಗ ಕಳ್ಳ ಕೈ ಚಳಕ ತೋರಿಸಿದ್ದಾನೆ. ಮಾಲೀಕ ಆಭರಣ ತರಲು ಅಂಗಡಿ ಒಳಗೆ ಹೋದಾಗ ಈತ ಪಕ್ಕದಲ್ಲಿ ಇಟ್ಟಿದ್ದ ಆಭರಣ ಎಗರಿಸಿ ಪರಾರಿಯಾಗಿದ್ದಾನೆ. ಕಳ್ಳನ ಕೈಚಳಕದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.