Wednesday, January 22, 2025

ರಾಜಕಾಲುವೆ ಒತ್ತುವರಿದಾರರಿಗೆ ‘ಬೃಹತ್’ ಶಾಕ್..!

ಬೆಂಗಳೂರು : ಮಳೆ ಬಂದಾಗ ಬೆಂಗಳೂರಿನಲ್ಲಿ ಆಗೋ ಅನಾಹುತಗಳು ಅಷ್ಟಿಷ್ಟಲ್ಲ. ಕಳೆದ ನಾಲ್ಕೈದು ತಿಂಗಳಿಂದ ನಗರದಲ್ಲಿ ಮಳೆರಾಯ ಅವಾಂತರಗಳನ್ನೇ ಸೃಷ್ಟಿ ಮಾಡಿದ್ದಾರೆ. ಈ ಅನಾಹುತಗಳಿಗೆ ಪ್ರಮುಖ ಕಾರಣ ರಾಜಕಾಲುವೆ ಒತ್ತುವರಿ. ಆದ್ರೆ, ಸಾಕಷ್ಟು ಅನಾಹುತಗಳು ನಡೆದ ಬಳಿಕ ಬಿಬಿಎಂಪಿ ಮತ್ತೆ ರಾಜಕಾಲುವೆ ಒತ್ತುವರಿ ತೆರವಿಗೆ ಮುಂದಾಗಿದೆ.

ಹೌದು. ಸರಿಯಾಗಿ ಮಳೆ ನೀರು ಸರಾಗವಾಗಿ ರಾಜಕಾಲುವೆಗೆ ಹರಿದು ಹೋಗದ ಕಾರಣ, ನೂರಾರು ತೊಂದರೆಗಳು ಆಗಿವೆ.ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆ, ವಾಣಿಜ್ಯ ಮಳಿಗೆಗಳು ಕೈಗಾರಿಕೆಗಳು ಸೇರಿ ಬೆಲೆ ಬಾಳುವ ಐಷಾರಾಮಿ ಕಟ್ಟಡಗಳನ್ನು ನಿರ್ಮಿಸಿಕೊಂಡ ಮಾಲೀಕರಿಗೆ ಸರ್ಕಾರ ಮರ್ಮಾಘಾತ ನೀಡಿದೆ. ವರ್ತೂರು ಕೋಡಿ, ದೊಡ್ಡಬೊಮ್ಮಸಂದ್ರ ಸೇರಿ ಹಲವೆಡೆ ಪಾಲಿಕೆ ಜೆಸಿಬಿಗಳು ಘರ್ಜನೆ ಮಾಡಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 842 ಕಿ.ಮೀ. ಉದ್ದದ ರಾಜಕಾಲುವೆ ಜಾಲವಿದ್ದು, 2626 ಕಡೆ ಒತ್ತುವರಿ ಗುರುತಿಸಲಾಗಿತ್ತು. ಇದರಲ್ಲಿ 1890 ಒತ್ತುವರಿ ಜಾಗ ತೆರವುಗೊಳಿಸಿದ್ದು, 736 ಕಡೆ ತೆರವುಗೊಳಿಸುವುದು ಬಾಕಿ ಇದೆ. ಒತ್ತುವರಿ ಮಾಡಿರುವ ಕಟ್ಟಡಗಳ ಪಟ್ಟಿಯನ್ನು ಬಿಬಿಎಂಪಿ ತಯಾರು ಮಾಡಿದೆ. ಒಟ್ಟು 714 ಕಟ್ಟಡಗಳ ತೆರವು ಮಾಡಲು ತೀರ್ಮಾನ ಕೈಗೊಂಡಿದೆ.

ಪೂರ್ವ ವಲಯದಲ್ಲಿ 110 ಕಟ್ಟಡ, ಪಶ್ಚಿಮ ವಲಯ 59 ಕಟ್ಟಡ, ದಕ್ಷಿಣ ವಲಯ 20, ಕೋರಮಂಗಲ ವ್ಯಾಲಿ ವಲಯ 3 ಕಟ್ಟಡ, ಯಲಹಂಕ ವಲಯ 103, ಮಹದೇವಪುರ ವಲಯ 184 ಕಟ್ಟಡ, ಬೊಮ್ಮನಹಳ್ಳಿ ವಲಯ 92, ಆರ್.ಆರ್. ನಗರ ವಲಯ 9 ಕಟ್ಟಡ ಹಾಗೂ ದಾಸರಹಳ್ಳಿ ವಲಯದ 134 ಕಟ್ಟಡಗಳನ್ನು ತೆರವು ಮಾಡಲು ಪಟ್ಟಿ ತಯಾರಿಸಲಾಗಿದೆ. ರಾಜಕಾಲುವೆ ಒತ್ತುವರಿ ಪರಿಣಾಮದಿಂದ ಸಣ್ಣ ಮಳೆಗೂ ಬೆಂಗಳೂರಿನಲ್ಲಿ ಜಲಪ್ರಳಯ ಕಂಡುಬರುತ್ತಿದೆ. ಇದಕ್ಕೆ ಕಾರಣ ರಾಜಕಾಲುವೆ ಒತ್ತುವರಿಯೇ ಪ್ರವಾಹಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಬಡವರು ರಾಜಕಾಲುವೆ ಮೇಲೆ ಮನೆ ನಿರ್ಮಾಣ ಮಾಡಿದ್ರೆ ಹೇಳದೆ ಕೇಳದೆ ಹೊಡೆದುಹಾಕಿದರು.ಆದರೆ, ಬಲಾಢ್ಯರು ಮನೆ, ಪಾರ್ಕ್​ನ ನಿರ್ಮಾಣ ಮಾಡುತ್ತಿದ್ದರೂ ನೋಡಿಕೊಂಡು ಸುಮ್ಮನೆ ಇದ್ರು.. ಬಡವರಿಗೆ ಒಂದು ನ್ಯಾಯ ಶ್ರೀಮಂತರಿಗೆ ಇನ್ನೊಂದು ನ್ಯಾಯ ಅಂತ ಜನ ಕೇಳಿದ್ರು. ಆದ್ರೆ, ಇದೀಗ ಮತ್ತೆ ರಾಜಕಾಲುವೆ ಒತ್ತುವರಿ ತೆರವಿಗೆ ಪಾಲಿಕೆ ಮುಂದಾಗಿದೆ.

ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES