ಉಪ್ಪು ಉಳಿ ಖಾರ ಬೆರಸಿ ಬಾಯಿ ಚಪ್ಪರಿಸಿ ತೋತಾಪುರಿ ಹಣ್ಣು ಸವಿಯೋಕೆ ಸಿನಿಪ್ರಿಯರು ಸಜ್ಜಾಗಿದ್ದಾರೆ. ಪೋಲಿ ಜೋಕುಗಳ ಸಾಹುಕಾರ ವಿಜಯ್ ಪ್ರಸಾದ್ ಟೇಸ್ಟಿ ತೋತಾಪುರಿ ನೀಡೋಕೆ ತುದಿಗಾಲ್ಲಲ್ಲಿ ನಿಂತಿದ್ದಾರೆ. ಐ ಕಾಂಟ್ ವೆಯ್ಟ್ ಅಂತಿದಾರೆ ಚಿತ್ರರಸಿಕರು. ದೇಶ ವಿದೇಶಗಳಲ್ಲಿ ತೋತಾಪುರಿಗೆ ಡಿಮ್ಯಾಂಡ್ ಜಾಸ್ತಿ ಆಗಿದೆ. ಯೆಸ್.. ತೋತಾಪುರಿಗೆ ಕೌಂಟ್ಡೌನ್ ಶುರುವಾಗಿದ್ದು, ಭರ್ಜರಿ ಪ್ರಮೋಷನ್ಗೆ ಚಾಲನೆ ಸಿಕ್ಕಿದೆ.
- ರಸಭರಿತ ಡೈಲಾಗ್ಸ್.. ರಸಿಕತೆಯ ಜೋಕ್ಸ್.. ಮಸ್ತ್ ತೋತಾಪುರಿ
ಪೋಲಿ ಜೋಕುಗಳ ಚೇರ್ಮನ್ ವಿಜಯ್ ಪ್ರಸಾದ್ ಬತ್ತಳಿಕೆಯಲ್ಲಿ ಹದವಾಗಿ ತಯಾರಾದ ರಸಭರಿತ ಟೇಸ್ಟಿ ಸಿನಿಮಾ ತೋತಾಪುರಿ. ನೀರ್ದೋಸೆ ಜೋಡಿ ಮತ್ತೆ ಚೇಷ್ಠೆ, ತಮಾಷೆ, ತಲೆಹರಟೆಯ ಮೂಲಕ ನಕ್ಕು ನಗಿಸೋಕೆ ಬರ್ತಿದೆ. ತೋತಾಪುರಿ ರಿಲೀಸ್ಗೆ ಕೌಂಟ್ಡೌನ್ ಶುರುವಾಗಿದ್ದು, ಕೇವಲ 29 ದಿನ ಮಾತ್ರ ಬಾಕಿ ಇದೆ. ಟ್ರೈಲರ್ ಕೊಟ್ಟ ಸವಿಯನ್ನೇ ಮೆಲುಕು ಹಾಕುತ್ತಿದ್ದ ಚಿತ್ರಪ್ರೇಮಿಗಳಿಗೆ ಸದ್ಯದಲ್ಲೇ ಮಸ್ತ್ ಮನರಂಜನೆ ಸಿಗಲಿದೆ.
ನಾಡಿನ ದೇಸಿ ಮಾವು ತೋತಾಪುರಿ ರುಚಿಗೆ ಪ್ರೇಕ್ಷಕರು ಫಿದಾ ಆಗಿದ್ದು ತೆರೆಯ ಮೇಲೆ ಸಿನಿಮಾ ನೋಡೋಕೆ ಕಾತರಾಗಿದ್ದಾರೆ. ಇನ್ನೂ ನವರಸಗಳನ್ನು ನುಂಗಿ ನೀರು ಕುಡಿದಿರೋ ಜಗ್ಗೇಶ್ ಕಣ್ಣಲ್ಲೇ ನಗಿಸೋ ಚಾಲಾಕಿಯಾಗಿದ್ದಾರೆ. ಈ ಸಿನಿಮಾದಲ್ಲಿ ಅವರ ನಾಟಿ ಘಾಟಿ ಮಾತುಗಳನ್ನು ಉಣಬಡಿಸಲಿದ್ದಾರೆ. ಬಾಗ್ಲೂ ತೆಗಿ ಮೆರಿ ಜಾನ್ ಯ್ಯೂಟ್ಯೂಬ್ನಲ್ಲಿ ಸಂಚಲನ ಮೂಡಿಸಿದ್ದು 20 ಮಿಲಿಯನ್ಗೂ ಅಧಿಕ ವೀವ್ಸ್ ದಾಖಲಿಸಿದೆ. ಅದಿತಿ ಬಿಂಕ ಭಿನ್ನಾಣ ಹಾಡಿಗೆ ಜೀವ ತುಂಬಿದೆ.
- ರಾಜ್ಯಾದ್ಯಂತ ಪ್ರವಾಸ ಮಾಡಲಿದೆ ತೋತಾಪುರಿ ಟೀಮ್
- ಸೆ. 30ಕ್ಕೆ ತೋತಾಪುರಿ ಐ ತೇರಿ ಲಕಡಿ ಪಕಡಿ ಜುಮ್ಮಾ..!
ವಿಜಯ್ ಪ್ರಸಾದ್ ಟ್ರೇಡ್ ಮಾರ್ಕ್ ಪೋಲಿಯೋ ಸಂಭಾಷಣೆ ಈ ಚಿತ್ರದಲ್ಲಿ ಡಬಲ್ ಇರಲಿದೆ. ಟ್ರೇಲರ್‌ನಲ್ಲಿಯೇ ಅವುಗಳ ಝಲಕ್ ಎದ್ದು ಕಾಣುತ್ತದೆ. ಜೊತೆಗೆ ಕೆಲವು ಮನಸ್ಸಿಗೆ ತಾಗುವ ಸಾಲುಗಳು ಸಹ ಇವೆ. ಜಗ್ಗೇಶ್, ಡಾಲಿ ಧನಂಜಯ್, ಸುಮನಾ ರಂಗನಾಥ್, ಹೇಮಾ ದತ್, ಅದಿತಿ ಪ್ರಭುದೇವಾ, ದತ್ತಣ್ಣ, ಹಿರಿ-ಕಿರಿ ನಟ-ನಟಿಯರು ಪೈಪೋಟಿಗೆ ಬಿದ್ದಂತೆ ನಟಿಸಿರುವುದು ಟ್ರೈಲರ್ನಲ್ಲಿ ಎದ್ದು ಕಾಣುತ್ತಿದೆ.
ಸೆ.30 ಕ್ಕೆ ತೆರೆಗೆ ಬರಲಿರೋ ತೋತಾಪುರಿ ಎರಡು ಭಾಗಗಳಲ್ಲಿ ಸಿದ್ಧವಾಗ್ತಿದೆ. ಈಗಾಗ್ಲೇ ಸಿನಿಮಾ ಪ್ರಮೋಷನ್ಸ್ಗೆ ತಯಾರಿ ಮಾಡಿಕೊಂಡಿದ್ದು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದೆ. ತುಂಟತನದ ತುರಿಕೆ ಸಂಭಾಷಣೆಯ ಮೂಲಕ ಕಾಮಿಡಿ ಕಿಕ್ಕು, ಸಾಮಾಜಿಕ ಸಂದೇಶದ ಟಾನಿಕ್ ಕೊಡಲಿದ್ದಾರೆ ವಿಜಯ್ ಪ್ರಸಾದ್. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬರ್ತಿರೋ ಮೊದಲ ಕನ್ನಡ ಕಾಮಿಡಿ ಸಿನಿಮಾ ಇದಾಗಿದ್ದು ನಿರೀಕ್ಷೆಯೂ ದುಪ್ಪಟ್ಟಾಗಿದೆ.
ಮೋನಿಫಿಕ್ಸ್ ಬ್ಯಾನರ್ನಡಿ ಕೆ.ಎ ಸುರೇಶ್ ತೋತಾಪುರಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅನೂಪ್ ಸೀಳಿನ್ ಮ್ಯೂಸಿಕ್ ಮ್ಯಾಜಿಕ್ ಮಾಡ್ತಿದ್ದು, ದಸರಾಗೆ ತೋತಾಪುರಿ ಬಾಯಲ್ಲಿ ನೀರು ತರಿಸೋದು ಪಕ್ಕಾ ಆಗಿದೆ. ವಿಶೇಷ ಅಂದ್ರೆ ಸೆಪ್ಟೆಂಬರ್ 30ಕ್ಕೆ ಅನೌನ್ಸ್ ಆಗಿದ್ದ ಧ್ರುವ ಸರ್ಜಾರ ಮಾರ್ಟಿನ್ ಹಾಗೂ ಹೊಂಬಾಳೆಯ ರಾಘವೇಂದ್ರ ಸ್ಟೋರ್ಸ್ ರಿಲೀಸ್ ಪೋಸ್ಟ್ಪೋನ್ ಆಗಿದ್ದು, ತೋತಾಪುರಿಗೆ ಲೈನ್ ಕ್ಲಿಯರ್ ಆಗಿದೆ. ಪೆಟ್ರೋಮ್ಯಾಕ್ಸ್ ಸೋಲನ್ನು ಮರೆಸಿ ದಸರಾ ಹಬ್ಬಕ್ಕೆ ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ ನೀಡಲಿದೆ ತೋತಾಪುರಿ.
ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ, ವಪರ್ ಟಿವಿ