Thursday, January 23, 2025

ಮೋದಿ ರ್ಯಾಲಿ ನೆಪದಲ್ಲಿ ಮಂಗಳೂರಿನಲ್ಲಿ ಅದ್ದೂರಿ ಕಾರ್ಯಕ್ರಮ

ಮಂಗಳೂರು : ಕೇಂದ್ರ ಸರಕಾರದ ಅಧೀನದ ಎನ್ಎಂಪಿಟಿ ಮತ್ತು ಎಂಆರ್‌ಪಿಎಲ್ ಕಂಪನಿಯ ಸರಕಾರಿ ಕಾರ್ಯಕ್ರಮ ಆಗಿದ್ದರೂ, ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಅಭಿನಂದನೆ ಸೂಚಿಸುವುದಕ್ಕಾಗಿ ಪರಸ್ಪರ ಜೋಡಿಸಿಕೊಂಡು ಕಾರ್ಯಕ್ರಮ ರೂಪಿಸಲಾಗಿದೆ.ಇದಕ್ಕಾಗಿ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸರಕಾರಿ ಯೋಜನೆಗಳ ಫಲಾನುಭವಿಗಳನ್ನು ಸೇರಿಸುವುದಕ್ಕಾಗಿ ಎರಡು ಸಾವಿರಕ್ಕೂ ಹೆಚ್ಚು ಬಸ್‌ಗಳನ್ನು ಬುಕ್ ಮಾಡಲಾಗಿದೆ. ಅಲ್ಲದೆ, ಇತರೇ ಸಾವಿರಾರು ವಾಹನಗಳು ಕಾರ್ಯಕ್ರಮಕ್ಕೆ ಬರಲಿದ್ದು, ಲಕ್ಷಾಂತರ ಜನರ ಸೇರುವಿಕೆಯಿಂದಾಗಿ ಇಡೀ ಮಂಗಳೂರು ಬ್ಲಾಕ್ ಆಗಲಿದೆ.

ಇದಲ್ಲದೆ, ಕಾರ್ಯಕ್ರಮದ ಯಶಸ್ಸಿಗಾಗಿ ರಾಜ್ಯ ಸರಕಾರವೇ ಮುಂದೆ ನಿಂತು ಅತ್ಯಧಿಕ ಸಂಖ್ಯೆಯಲ್ಲಿ ಜನರನ್ನು ಕರೆತರಲು ಸರಕಾರಿ ಅಧಿಕಾರಿಗಳಿಗೇ ಟಾಸ್ಕ್ ನೀಡಿದೆ ಎನ್ನಲಾಗಿದೆ. ಅಲ್ಲದೆ, ಬಿಜೆಪಿ ಪ್ರಮುಖರು ಪ್ರತೀ ಗ್ರಾಮದಿಂದ ಜನರನ್ನು ಕರೆತರಲು ಪ್ರತ್ಯೇಕ ವ್ಯವಸ್ಥೆ ನಡೆಸಿದ್ದಾರೆ. ಪಿಡಿಓಗಳಿಂದ ಹಿಡಿದು ಎಲ್ಲ ಸ್ತರದ ಸ್ಥಳೀಯಾಡಳಿತ ವ್ಯವಸ್ಥೆಯ ಸರಕಾರಿ ನೌಕರರು ಕಾರ್ಯಕ್ರಮಕ್ಕೆ ಬರುವಂತೆ ಮಾಡಲಾಗಿದೆ. ಅದ್ದೂರಿ ಕಾರ್ಯಕ್ರಮದ ನಿಟ್ಟಿನಲ್ಲಿ ಭಾರೀ ಬಂದೋಬಸ್ತ್ ಮಾಡಲಾಗಿದ್ದು, ಎರಡು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಖುದ್ದಾಗಿ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಒಂದು ದಿನಕ್ಕೆ ಮೊದಲೇ ಆಗಮಿಸಿದ್ದು, ಕಾರ್ಯಕ್ರಮದ ರೂಪುರೇಷೆ ತಿಳಿದುಕೊಂಡಿದ್ದಾರೆ. ಭದ್ರತೆ ನಿಟ್ಟಿನಲ್ಲಿ ಡಿಜಿಪಿ ಅವರೇ ಉಸ್ತುವಾರಿ ವಹಿಸ್ಕೊಂಡಿದ್ದಾರೆ. ಅಲ್ಲದೆ, ನೂರು ಉನ್ನತ ಮಟ್ಟದ ಅಧಿಕಾರಿಗಳು ಸ್ಥಳದಲ್ಲಿ ಇರುತ್ತಾರೆ ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಮಂಗಳೂರಿನಲ್ಲಿ 3700 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಕೃಷಿ ಸಮ್ಮಾನ್, ವಿದ್ಯಾನಿಧಿ ಸೇರಿ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಕರೆತರಲು ಎರಡು ಸಾವಿರಕ್ಕೂ ಹೆಚ್ಚು ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

ಇದಲ್ಲದೆ, ಕರಾವಳಿಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಯ ನಂತರ ಕಾರ್ಯಕರ್ತರೇ ಬಿಜೆಪಿ ಸರಕಾರದ ವಿರುದ್ಧ ಸಿಡಿದು ನಿಂತಿದ್ದಾರೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಬಗ್ಗೆಯೇ ಕಿಡಿ ಕಾರುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಳಿನ್ ಹಠಾವೋ ಎನ್ನುವ ರೀತಿ ಪ್ರಚಾರ ಮಾಡುತ್ತಿದ್ದಾರೆ. ಮೋದಿ ಕಾರ್ಯಕ್ರಮದಲ್ಲೇ ನಳಿನ್ ವಿರೋಧಿ ಘೋಷಣೆ ಕೂಗುವುದಕ್ಕೂ ಕೆಲವರು ರೆಡಿಯಾಗಿದ್ದಾರೆ. ಹೀಗಾಗಿ ಈ ನಿಟ್ಟಿನಲ್ಲೂ ಪೊಲೀಸರನ್ನು ಹೆಚ್ಚಿಸಿದ್ದು, ಧಿಕ್ಕಾರ ಕೂಗುವ ಕಾರ್ಯಕರ್ತರ ಮೇಲೆ ನಿಗಾ ಇಡಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಇಡೀ ವೇದಿಕೆಯ ಸುತ್ತಮುತ್ತ ಸಿಸಿಟಿವಿ ಅಳವಡಿಸಿ ಕಾರ್ಯಕ್ರಮದ ಬಗ್ಗೆ ನಿಗಾ ಇಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅತೃಪ್ತ ಬಿಜೆಪಿ ಕಾರ್ಯಕರ್ತರನ್ನು ಸಮಾಧಾನ ಮಾಡುತ್ತಾರಾ ಅನ್ನೋದು ಕೂಡ ಕುತೂಹಲದ ಅಂಶ. ಒಟ್ಟಿನಲ್ಲಿ ಮೋದಿ ಕಾರ್ಯಕ್ರಮವನ್ನು ಬಿಜೆಪಿ ಚುನಾವಣೆ ತಯಾರಿ ಅನ್ನುವ ರೀತಿ ಬಿಂಬಿಸಿದ್ದರೆ, ಅದಕ್ಕೆ ಸರಕಾರಿ ಯಂತ್ರವನ್ನೂ ಅಷ್ಟೇ ಯುದ್ಧೋಪಾದಿಯಲ್ಲಿ ಬಳಸ್ಕೊಂಡಿದೆ.

ಗಿರಿಧರ್ ಶೆಟ್ಟಿ ಪವರ್ ಟಿವಿ ಮಂಗಳೂರು

RELATED ARTICLES

Related Articles

TRENDING ARTICLES