ಬೆಂಗಳೂರು : ಎಲ್ಲವೂ ಸರಿ ಹೋಗಿದ್ರೆ ಇಷ್ಟೊತ್ತಿಗಾಗಲೇ ಬಿಬಿಎಂಪಿ ಚುನಾವಣೆ ನಡೆದು ಬಿಬಿಎಂಪಿ ಕಾರ್ಪೊರೇಟರ್ ಗಳು ತಮ್ಮ ತಮ್ಮ ವಾರ್ಡ್‌ನಲ್ಲಿ ಅಭಿವೃದ್ಧಿ ಕೆಲಸಗಳತ್ತ ಗಮನ ಕೊಡಬೇಕಾಗಿತ್ತು. ಆದರೆ, ಅದ್ಯಾವುದೂ ಆಗದೇ ಬಿಬಿಎಂಪಿ ಚುನಾವಣೆಯ ವಿಚಾರ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಅಂಗಳದಲ್ಲೇ ಇದೆ. ಸುಪ್ರೀಂಕೋರ್ಟ್ ಚುನಾವಣೆ ನಡೆಸಿ ಅಂತ ಅನುಮತಿ ಕೊಟ್ರೂ, ಚುನಾವಣೆ ನಡೆಸೋದಕ್ಕೆ ಸಾಧ್ಯ ಆಗ್ತಾ ಇಲ್ಲ. ಇದಕ್ಕೆ ಮುಖ್ಯ ಕಾರಣ ವಾರ್ಡ್ ಮೀಸಲಾತಿ ಪಟ್ಟಿ, ಚುನಾವಣಾ ಆಯೋಗ ಬಿಬಿಎಂಪಿ ವಾರ್ಡ್ ಮೀಸಲಾತಿ ಪಟ್ಟಿಯನ್ನು ಪ್ರಕಟ ಮಾಡಿದೆ. ಚುನಾವಣಾ ಆಯೋಗ ಹೊರಡಿಸಿದ ಬಿಬಿಎಂಪಿ ವಾರ್ಡ್ ಮೀಸಲಾತಿ ಪಟ್ಟಿ ವಿರೋಧಿಸಿ ವಕೀಲರಾದ ಎಂ. ಜಯಮುವಿಲ್ ಅವರು ಹೈಕೋರ್ಟ್‌ಗೆ ಆಕ್ಷೇಪಣೆ ಅರ್ಜಿ ಸಲ್ಲಿಸಿದ್ರು. ವಕೀಲ ಜಯಮುವೀಲ್ ಅವರ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಚುನಾವಣಾ ಆಯೋಗ ಮತ್ತು ಸರ್ಕಾರಕ್ಕೆ ಮೀಸಲಾತಿ ಕುರಿತು ವಿಚಾರಣೆಗೆ ಬರುವಂತೆ ಸೂಚನೆ ನೀಡಿತ್ತು. ಹೈಕೋರ್ಟ್ ಸೂಚನೆಯಂತೆ ಸರ್ಕಾರದ ಪರ ಎಜಿ ಪ್ರಭುಲಿಂಗ ನಾವದಗಿ ಅವ್ರು ಕೋರ್ಟ್‌ಗೆ ಹಾಜರಾಗಿದ್ರು. ಚುನಾವಣಾ ಆಯೋಗದ ಪರ ಫಣೀಂದ್ರ ಹಾಜರಾಗಿದ್ರೆ ಅರ್ಜಿದಾರರ ಪರ ವಕೀಲ ಪೊನ್ನಣ್ಣ ಹಾಜರಾಗಿದ್ದರು.
ಹೈಕೋರ್ಟ್ ಏಕ ಸದಸ್ಯ ಪೀಠ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಮೂಲಕ ಮೀಸಲಾತಿ ಅರ್ಜಿ ವಿಚಾರಣೆ ನಡೆಯಿತು. ವಿಚಾರಣೆಯಲ್ಲಿ ಸರ್ಕಾರದ ಪರ ವಾದ ಮಂಡಿಸಿದ ಎಜಿ ಪ್ರಭುಲಿಂಗ ನಾವದಗಿ ಅವ್ರು ಹೆಚ್ಚುವರಿ ಆಕ್ಷೇಪಣೆ ಸಲ್ಲಿಕೆಗೆ ಮನವಿ ಮಾಡಿದ್ರು. ಈ ಬಗ್ಗೆ ಚುನಾವಣಾ ಆಯೋಗ ಕೂಡ ಸೆಪ್ಟೆಂಬರ್ 20 ರವರೆಗೆ ಚುನಾವಣಾ ವೇಳಾಪಟ್ಟಿ ಪ್ರಕಟ ಮಾಡೋದಿಲ್ಲ ಮತ್ತು ಅದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲ್ಲ ಎಂದು ಉತ್ತರಿಸಿದೆ.
ಈ ಹಿನ್ನೆಲೆಯಲ್ಲಿ ಹೈ ಕೋರ್ಟ್ ಬಿಬಿಎಂಪಿ ವಾರ್ಡ್ ಪುನರ್ವಿಂಗಡಣೆ ವಿಚಾರಣೆಯನ್ನು ಸೆಪ್ಟೆಂಬರ್ 8ಕ್ಕೆ ಮುಂದೂಡಿದ್ದು, ಮೀಸಲಾತಿ ಪಟ್ಟಿ ವಿಚಾರಣೆಯನ್ನು ಶುಕ್ರವಾರ ಮಧ್ಯಾಹ್ನಕ್ಕೆ ಮುಂದೂಡಿದೆ. ಅದಕ್ಕೆ ನಾವು ಹೇಳಿದ್ದು ದೇವರು ಕೊಟ್ರೂ ಪುಜಾರಿ ಕೊಟ್ಟಿಲ್ಲ ಎಂಬಂತಾಗಿದೆ.
ಅಶ್ವಥ್ ಎಸ್.ಎನ್.ಕ್ರೈಂ ಬ್ಯೂರೋ ಪವರ್ ಟಿವಿ