ಚಿತ್ರದುರ್ಗ : ನ್ಯಾಯಾಲಯದಲ್ಲಿ ಬಾಲಕಿಯರ ಹೇಳಿಕೆ, ಒಂದು ದಿನ ಕಳೆದ್ರೂ ತನಿಖಾಧಿಕಾರಿಗೆ ಸಿಗದ ಕಾಪಿ, ಇತ್ತ ಮಠಕ್ಕೆ ಕಾನೂನು ಸೇವಾ ಪ್ರಾಧಿಕಾರ ಆಗಮನ, ಇನ್ನೊಂದೆಡೆ ಖ್ಯಾತ ವಕೀಲ ಬಾಲನ್ ಎಂಟ್ರಿ. ಹೌದು ಈ ಎಲ್ಲಾ ಬೆಳವಣಿಗೆಗಳು ಕಂಡು ಬಂದಿದ್ದು ಚಿತ್ರದುರ್ಗ ಮುರುಘಾ ಮಠದಲ್ಲಿ. ಹೌದು, ಈಗಾಗಲೇ ಶ್ರೀಗಳ ಮೇಲೆ ಎರಡು ಕೇಸ್‌ಗಳು ದಾಖಲಾಗಿದ್ರೂ ಶ್ರೀಗಳು ಮಾತ್ರ ಇನ್ನೂ ಬಂಧಿಯಾಗಿಲ್ಲ ಅನ್ನೋದು ಒಡನಾಡಿ ಸಂಸ್ಥೆ ಹಾಗೂ ಜನರ ಆರೋಪ.. ಇತ್ತ ಸ್ವಾಮೀಜಿ ಅಣತಿಯಂತೆ ಎಲ್ಲವೂ ನಡೀತಾ ಇದೆಯಾ ಅನ್ನೋ ಅನುಮಾನಗಳೂ ಹುಟ್ಟಿಕೊಂಡಿವೆ. ಯಾಕಂದ್ರೆ, ಸಂತ್ರಸ್ತ ಬಾಲಕಿಯರು ಈಗಾಗಲೇ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾರೆ. ಆದ್ರೆ, ಅದಿನ್ನೂ ತನಿಖಾಧಿಕಾರಿ ಅನಿಲ್ ಕುಮಾರ್ ಅವರಿಗೆ ತಲುಪಿಯೇ ಇಲ್ಲ ಎಂಬ ಮಾಹಿತಿ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ ರಜೆಯೇ ಕಾರಣವೋ ಅಥವಾ ಒತ್ತಡದ ಕಾರಣವೋ ಯಾವುದೇ ತನಿಖೆ ನಡೆದಿಲ್ಲ. ಇದೆಲ್ಲವನ್ನೂ ಗಮನಿಸುತ್ತಾ ಹೋದ್ರೆ ಗುರುವಾರದವರೆಗೂ ಕಾಲ ಮುಂದೂಡುವುದು ಇದರ ಹಿಂದಿರುವ ತಂತ್ರ ಎನ್ನಲಾಗ್ತಿದೆ. ಯಾಕಂದ್ರೆ, ಗುರುವಾರ ಮುರುಘಾ ಶ್ರೀಗಳ ಪರ ವಕೀಲ ಶಂಕರಪ್ಪ ಹಾಕಿದ್ದ ಬೇಲ್ ಅರ್ಜಿ ವಿಚಾರಣೆ ಇದೆ, ಬೇಲ್ ಪಡೆದು ನಿರಾಳರಾಗಿ ಮುಂದೆ ತನಿಖೆ ಎದುರಿಸೋದು ಸ್ವಾಮೀಜಿ ಪ್ಲ್ಯಾನ್ ಆಗಿರಬಹುದು ಎನ್ನಲಾಗ್ತಿದೆ.
ಗುರುವಾರ ಮುರುಘಾ ಮಠದ ಶಿವಮೂರ್ತಿ ಶರಣರ ವಿಚಾರಣೆ ನಡೆಯುತ್ತಾ..?ಪೋಕ್ಸೊ ಕೇಸ್ ಹಿನ್ನೆಲೆಯಲ್ಲಿ ಮುರುಘಾ ಶ್ರೀಗಳು ಅರೆಸ್ಟ್ ಆಗ್ತಾರಾ, ಅರೆಸ್ಟ್ ಆದ್ರೆ ಗುರುವಾರವೇ ಶಿವಮೂರ್ತಿ ಶರಣರ ವೈದ್ಯಕೀಯ ಪರೀಕ್ಷೆ ಆಗುತ್ತಾ. ಅನ್ನೋ ಎಲ್ಲಾ ಪ್ರಶ್ನೆಗಳಿಗೆ ಅಂದೇ ಉತ್ತರ ಸಿಗುತ್ತೆ, ಆದರೆ ಸದ್ಯಕ್ಕಂತೂ ಶ್ರೀಗಳಿಗೆ ಬಂಧನದ ಭೀತಿಯಂತೂ ಇದ್ದೇ ಇದೆ. ಇನ್ನು ಈ ಹಿಂದೆ ವೈರಲ್ ಆಗಿದ್ದ ಸಂಧಾನಕ್ಕೂ ಸೈ, ಸಮರಕ್ಕೂ ಸೈ ಎಂಬ ಸ್ವಾಮೀಜಿ ಹೇಳಿಕೆ ಮುನ್ನೆಲೆಗೆ ಬಂದಿದೆ, ಯಾಕಂದ್ರೆ ಹಿರಿಯ ವಕೀಲ ಬಾಲನ್ ಎಂಟ್ರಿ ಕೊಟ್ಟಿದ್ದಾರೆ, ಸ್ವಾಮೀಜಿ ಸಲ್ಲಿಸಿದ್ದ ಬೇಲ್ ಅರ್ಜಿ ವಿರೋಧಿಸಿ ಬಾಲನ್ ಕೆಲಸ ಮಾಡಲಿದ್ದಾರೆ ಅನ್ನೋ ಮಾತು ಕೇಳಿ ಬಂದಿದ್ದು, ಸಂಧಾನ ಆಗಿಲ್ಲ, ಸಮರವೇ ಎಲ್ಲಾ ಅನ್ನೋದು ಸ್ಪಷ್ಟವಾಗುತ್ತಿದೆ.
ಇನ್ನೂ ಚಿತ್ರದುರ್ಗ ಮುರುಘಾ ಮಠದ ವಸತಿ ನಿಲಯಕ್ಕೆ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ನ್ಯಾಯಾಧೀಶರಾದ ಬಿ.ಕೆ. ಗಿರೀಶ್ ಅವರ ಆಗಮನ ಆಗಿದೆ, ಮಠದ ಒಳಭಾಗದ ಹಾಸ್ಟೆಲ್ಗೆ ತೆರಳಿ ಪರಿಶೀಲನೆ ಮಾಡಲಾಗಿದೆ. ಒಟ್ಟಾರೆ ಗುರುವಾರ ನ್ಯಾಯಾಲಯದಲ್ಲಿ ನಡೆಯುವ ಬೇಲ್ ಅರ್ಜಿ ವಿಚಾರಣೆ ಬಳಿಕ ಮತ್ತೆ ತಂತ್ರ ಪ್ರತಿತಂತ್ರಗಳು ಶುರುವಾಗಲಿದೆ.
ಮಧುನಾಗರಾಜ್ ಕುಂದುವಾಡ, ಪವರ್ ಟಿವಿ ಚಿತ್ರದುರ್ಗ