Monday, May 20, 2024

ವರುಣಾರ್ಭಟಕ್ಕೆ ರಾಮನಗರ ಜಿಲ್ಲೆ ತತ್ತರ

ರಾಮನಗರ :  ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು, ಅವಾಂತರಗಳೇ ಸೃಷ್ಟಿಯಾಗಿದೆ. ಚನ್ನಪಟ್ಟಣ ತಾಲೂಕಿನ ಕೊಂಡಾಪುರ ಗ್ರಾಮದಲ್ಲಿ‌ ಸುಮಾರು 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಜನರು ಕಣ್ಣೀರಲ್ಲಿ ಕೈ ತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹುಣಸನಹಳ್ಳಿ ಗ್ರಾಮದ ಬಿಸಿಲೇಶ್ವರಿ ದೇವಾಲಯಕ್ಕೆ ಜಲದಿಗ್ಬಂಧನವಾಗಿದೆ. ಕೆರೆಮೇಗಳದೊಡ್ಡಿ ಗ್ರಾಮದ ಕೆರೆ ಏರಿ ಕುಸಿದಿದ್ದು, ಅಕ್ಕಪಕ್ಕದ ಗ್ರಾಮದ ಜನರು ಆತಂಕದಲ್ಲಿದ್ದಾರೆ.

ಚನ್ನಪಟ್ಟಣದಲ್ಲಿ ಮಹಾಮಳೆಗೆ ಮತ್ತೊಂದು ಬಲಿಯಾಗಿದೆ. ಹರೀಸಂದ್ರ ತಿಮ್ಮಸಂದ್ರ ಗ್ರಾಮಗಳ ನಡುವಿನ ನದಿಯಲ್ಲಿ ಯುವಕ ಕೊಚ್ಚಿಹೋಗಿದ್ದು, ಮೃತದೇಹ ಪತ್ತೆಯಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕನಕಪುರ ತಾಲೂಕಿನ ಹಾರೋಹಳ್ಳಿ ಪಟ್ಟಣ ಸಂಪೂರ್ಣ ಜಲಾವೃತವಾಗಿದೆ. ಹಾರೋಹಳ್ಳಿಯ ದೊಡ್ಡಕೆರೆ ಕೋಡಿ ಬಿದ್ದು ಸುಮಾರು 200ಕ್ಕೂ ಹೆಚ್ಚು ಮನೆಗಳು, ಅಂಗಡಿಗಳಿಗೆ ನೀರು ನುಗ್ಗಿದೆ.

ಮಳೆ ಹಾನಿ ಪ್ರದೇಶಗಳಲ್ಲಿ ಮಾಜಿ ಸಿಎಂ ಹೆಚ್​​.ಡಿ. ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಬಿಡದಿಯ ಇಟ್ಟಮಡು ಗ್ರಾಮದ ಬೋರೆಗೌಡರ ನಿವಾಸಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ಸರ್ಕಾರದ ವತಿಯಿಂದ ನೀಡಿದ 5 ಲಕ್ಷ ಪರಿಹಾರದ ಚೆಕ್ ವಿತರಿಸಿದರು.

ಮಹಾಮಳೆಯಿಂದಾಗಿ ಹಾವೇರಿ ಜಿಲ್ಲೆಯ ಹಾನಗಲ್, ಬ್ಯಾಡಗಿ, ರಾಣೆಬೇನ್ನೂರು ತಾಲೂಕುಗಳಲ್ಲಿ ಜಮೀನುಗಳು ಜಲಾವೃತವಾಗಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಶೇಂಗಾ, ಭತ್ತ, ಕಬ್ಬು ಸೇರಿದಂತೆ ತೋಟಗಾರಿಕ ಬೆಳೆಗಳು ಸಹ ನೀರುಪಾಲಾಗಿವೆ. ಎಂ.ತಿಮ್ಮಲ್ಲಾಪುರ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿ ಜನರ ಬದುಕು ದುಸ್ತರವಾಗಿದೆ.

ಹಾವೇರಿಯ ವಿವಿಧೆಡೆ ಸೇತುವೆಗಳು ಮುಳುಗಡೆಯಾಗಿದ್ದು, ಜನರು ಓಡಾಡಲು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಹಳ್ಳದಲ್ಲಿ ಸಿಲುಕಿದ್ದ ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ.

ಒಟ್ಟಾರೆ ಮಳೆರಾಯನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ಹೀಗೆ ಮುಂದುವರೆದ್ರೆ ಮುಂದೇನು ಎಂಬುವುದು ಜನರ ಆತಂಕವಾಗಿದೆ.

RELATED ARTICLES

Related Articles

TRENDING ARTICLES