ನವದೆಹಲಿ : ದೆಹಲಿಯ ಆಮ್ ಆದ್ಮಿ ಪಕ್ಷದ ನಾಯಕರ ಮೇಲೆ ಅಕ್ರಮ ಅಬಕಾರಿ ನೀತಿಯ ತೂಗುಗತ್ತಿ ನೇತಾಡ್ತಿದೆ. ಉಪಮುಖ್ಯಮಂತ್ರಿ, ಅಬಕಾರಿ ಸಚಿವರೂ ಆಗಿರುವ ಮನೀಶ್ ಸಿಸೋಡಿಯಾ ಅವರ ವಿರುದ್ಧ ಕೇಳಿ ಬಂದಿರುವ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ, ಉತ್ತರಪ್ರದೇಶದಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಸಿಸೋಡಿಯಾಗೆ ಸೇರಿದ ಲಾಕರ್ ಅನ್ನು ಪತ್ತೆ ಮಾಡಿ ಶೋಧ ನಡೆಸುತ್ತಿದೆ. ಅಬಕಾರಿ ನೀತಿಯಲ್ಲಿ ಅಕ್ರಮ ನಡೆದ ಬಗ್ಗೆ ಮನೀಶ್ ಸಿಸೋಡಿಯಾ ವಿರುದ್ಧ ಸಿಬಿಐ ದಾಳಿ ನಡೆಸಿ ತನಿಖೆ ಮಾಡುತ್ತಿದೆ. ಈ ವೇಳೆ, ಉತ್ತರ ಪ್ರದೇಶದ ಗಾಜಿಯಾಬಾದ್ನ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯಲ್ಲಿ ಸಿಸೋಡಿಯಾ ಮತ್ತು ಅವರ ಪತ್ನಿಯ ಹೆಸರಿನಲ್ಲಿರುವ ಲಾಕರ್ ಇರುವುದನ್ನು ಪತ್ತೆ ಮಾಡಲಾಗಿದೆ. ಸಿಬಿಐ ಅಧಿಕಾರಿಗಳು ಇಬ್ಬರನ್ನೂ ಕರೆದೊಯ್ದು ಲಾಕರ್ ತೆಗೆದು ಶೋಧ ನಡೆಸುತ್ತಿದ್ದಾರೆ.
ಈ ಮಧ್ಯೆ, ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಡಿಸಿಎಂ ಪರ ಬ್ಯಾಟ್ ಬೀಸ್ತಿದ್ದಾರೆ. ಅಬಕಾರಿ ನೀತಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಬೆಳೆವಣಿಗೆ ನಡುವೆಯೇ ಅಣ್ಣಾ ಹಜಾರೆ ಚಾಟಿ ಬೀಸಿದ್ದಾರೆ. ಅಧಿಕಾರದ ಅಮಲು ನಿಮಗೂ ತಟ್ಟಿದೆ. ಅದನ್ನು ಇಳಿಸಿಕೊಳ್ಳಿ. ಜೊತೆಗೆ, ಮದ್ಯ ಮಾರಾಟಕ್ಕೆ ಕೊಡ್ತಿರುವ ಲೈಸೆನ್ಸ್ ನಿಲ್ಲಿಸಿ ಅಂತ ಕೇಜ್ರಿವಾಲ್ ಸರ್ಕಾರದ ಮದ್ಯನೀತಿಯ ಬಗ್ಗೆ ಅಣ್ಣಾ ಹಜಾರೆ ಪತ್ರ ಬರೆದಿದ್ದಾರೆ.
2012 ಸೆಪ್ಟೆಂಬರ್ 18 ರಂದು ಅಂದರೆ, 10 ವರ್ಷಗಳ ಹಿಂದೆ ಅಣ್ಣಾ ಟೀಮ್ ದೆಹಲಿಯಲ್ಲಿ ಸಭೆ ಸೇರಿದ್ದಾಗ, ಆ ವೇಳೆ ತಾವು ರಾಜಕಾರಣದ ಕಡೆಗೆ ಹೋಗುವ ಮಾತನ್ನು ಆಡಿದ್ದೀರಿ. ಆದರೆ, ರಾಜಕೀಯ ಪಕ್ಷ ಮಾಡುವುದು ಎಂದಿಗೂ ನಮ್ಮ ಚಳವಳಿಯ ಉದ್ದೇಶವಾಗಿರಲಿಲ್ಲ. ತಮ್ಮ ತಂಡದ ಸದಸ್ಯರಾದವರಿಗೂ ಕೂಡ ಅಧಿಕಾರದ ಅಮಲು ತಟ್ಟಿತಲ್ಲ ಎನ್ನುವುದೇ ಬೇಸರದ ವಿಚಾರ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಅಣ್ಣಾ ಹಜಾರೆ ಪತ್ರ ಬರೆದಿದ್ದಾರೆ.
ರಾಜಕೀಯಕ್ಕೆ ಹೋಗಿ ಒಂದು ರಾಜ್ಯದ ಮುಖ್ಯಮಂತ್ರಿಯಾದ ಬಳಿಕ ಎಲ್ಲಾ ಆದರ್ಶ ಸಿದ್ಧಾಂತವನ್ನು ಮರೆತು ಹೋಗಿದ್ದೀರಿ. ಮದ್ಯದಲ್ಲಿ ಹೇಗೆ ಅಮಲು ಬರುವಂಥ ಅಂಶ ಇರುತ್ತದೆಯೋ ಅದೇ ರೀತಿ, ಅಧಿಕಾರದ ಅಮಲು ನಿಮಗೆ ತಟ್ಟಿರುವಂಥೆ ಕಾಣುತ್ತಿದೆ. ನೀವೂ ಈಗ ಅಂಥ ಅಧಿಕಾರದ ಅಮಲಿನಲ್ಲಿದ್ದೀರಿ ಎಂದು ಅಣ್ಣಾ ಹಜಾರೆ ಚಾಟಿ ಬೀಸಿದ್ದಾರೆ.
ಹೊಸ ಅಬಕಾರಿ ನೀತಿಯ ಬಗ್ಗೆ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರವು ವಿರೋಧ ಪಕ್ಷಗಳಿಂದ ಸಾಲು ಸಾಲು ಆರೋಪಗಳು ಎದುರಿಸುತ್ತಿದೆ. ಪಕ್ಷದ ನಿಕಟವರ್ತಿಗಳಿಗೆ ಈ ನೀತಿಯಿಂದ ಲಾಭವಾಗಿದೆ ಎಂದು ಆರೋಪಿಸಲಾಗಿದೆ. ಇದಲ್ಲದೇ ಈ ನೀತಿಯ ಮೂಲಕ ಹಗರಣ ನಡೆದಿದೆ ಎಂದು ಬಿಜೆಪಿ ಕಿಡಿಕಾರಿದೆ. ಈ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸುತ್ತಿದ್ದು, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ 15 ಮಂದಿ ಮತ್ತು ಸರ್ಕಾರದ ಪ್ರಮುಖರನ್ನು ಆರೋಪಿ ಸ್ಥಾನದಲ್ಲಿ ಇರಿಸಲಾಗಿದೆ.
ಅರವಿಂದ್ ಕೇಜ್ರಿವಾಲ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಟನೆ ನಡೆಸ್ತಿದೆ. ಮತ್ತೊಂದೆಡೆ, ದೆಹಲಿ ಸರ್ಕಾರದ ವಿರುದ್ಧ ಕೇಂದ್ರ ಸರ್ಕಾರ ಸಮರ ಸಾರಿದ್ದು, ಮದ್ಯದ ಅಮಲು ಇಳಿಯೋದು ಗ್ಯಾರಂಟಿಯಾಗಿದೆ.