ಮೈಸೂರು: ಪ್ರೋಕ್ಸೋ ಕಾಯ್ದಯಡಿ ಪ್ರಕರಣ ದಾಖಲಾದರೆ ಆಪಾದಿತ ಆಗಲ್ಲ, ಅಪರಾಧಿ ಆಗುತ್ತಾನೆ. ಪ್ರೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾದ 24 ಗಂಟೆಯೊಳಗೆ ರಾಜ್ಯ ಸರ್ಕಾರ ಅರೆಸ್ಟ್ ಮಾಡಬೇಕಿತ್ತು ಎಂದು ವಿಧಾನ ಪರಿಷತ್ತು ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ಈ ಕೇಸ್ ದಿಕ್ಕು ತಪ್ಪುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಮುರುಘಾ ಮಠದ ಶರಣರ ಮೇಲೆ ಲೈಂಗಿಕ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಈ ಬಗ್ಗೆ ಮಾತನಾಡಿದ ಹೆಚ್.ವಿಶ್ವನಾಥ್, ಸ್ವಾಮೀಜಿ ವಿರುದ್ಧ ಪ್ರೋಕ್ಸೋ ಕಾಯ್ದೆ ಅಡಿ ಕೇಸ್ ದಾಖಲಾಗಿದೆ. ಸರ್ಕಾರ, ಇಲಾಖೆ ಕ್ರಮ ಕೈಗೊಳ್ಳಬೇಕಿತ್ತು. ಗೃಹ ಮಂತ್ರಿ ಕಾನೂನು ಪಾಲಿಸಬೇಕು, ರಕ್ಷಣೆ ಮಾಡುವ ಮಾತನಾಡಬಾರದು. ಜಾತಿ, ಧರ್ಮ, ಪಂಥ ಯಾವುದೂ ಬರಬಾರದು ಎಂದರು.
ನಾವು ರಾಜಕಾರಣಿಗಳು ಪ್ರಕರಣವನ್ನು ದಿಕ್ಕು ತಪ್ಪಿಸುತ್ತಿದ್ದೇವೆ. ಅಪರಾಧಿ ಹೊರ ರಾಜ್ಯಕ್ಕೆ ಹೋಗುತ್ತಿದ್ದರೆ ಪೊಲೀಸರೇ ಗೌರವಯುತವಾಗಿ ಕರೆದುಕೊಂಡು ಬರುತ್ತಾರೆ. ಮಠಕ್ಕೆ ವಾಪಸ್ ಕರೆದುಕೊಂಡು ಬರುತ್ತಾರೆ. ಅಪರಾಧಿ ಪರವಾಗಿ ಘೋಷಣೆ ಕೂಗುತ್ತಿದ್ದಾರೆ. ಪ್ರಾಪ್ತರು, ಸಂಸಾರಸ್ಥರ ಮೇಲೆ ಆಗುವುದು ಬೇರೆ. ಪೋಕ್ಸೋ ಪ್ರಕಾರ, ಘಟನೆಯಾದ 20 ವರ್ಷವಾದ ಬಳಿಕವೂ ಬಂದು ದೂರು ಕೊಡಬಹುದು.
ಕರ್ನಾಟಕ ಎಂದರೆ ಗುರು ಪರಂಪರೆ, ಗುರುವೇ ದೇವರು ಎಂದು ನಂಬಿದ್ದೇವೆ. ಮುರುಘ ಮಠಕ್ಕೆ ದೊಡ್ಡ ಇತಿಹಾಸವಿದೆ ಎಂದು ಎಂಎಲ್‌ಸಿ ಅಡಗೂರು ಎಚ್.ವಿಶ್ವನಾಥ್ ಹೇಳಿದರು.