ಚಿತ್ರದುರ್ಗ : ನಾವು ಮುರುಘಾಶ್ರೀಗಳ ಶಿಷ್ಯರು ಆಗಿರೋದ್ರಿಂದ ಬಹುದೊಡ್ಡ ತೀರ್ಮಾನದ ಬಗ್ಗೆ ಮಾತನಾಡಲು ಆಗಲ್ಲ ಎಂದು ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿನಿತ್ಯದಂತೆ ಸ್ವಾಮೀಜಿಯವರನ್ನು ಮಾತನಾಡಿಸಲು ಬಂದಿದ್ದೆ. ಮುರುಘಾ ಮಠ ದೊಡ್ಡ ಪರಂಪರೆಯ ಮಠ. ಶೂನ್ಯ ಪೀಠಕ್ಕೆ ಒಂದು ಪ್ರಸಿದ್ದ ಪರಂಪರೆ ಇದೆ. ಮುರುಘಾ ಮಠದ ಜೊತೆಗೆ ನಾವು ಬದ್ದವಾಗಿ ಇರ್ತೀವಿ. ಈ ಮಠಕ್ಕೆ ಒಂದು ಬಹುದೊಡ್ಡ ಭಕ್ತ ಸಮೂಹ, ಆಡಳಿತ ಮಂಡಳಿಯಿದೆ. ಸ್ವಾಮೀಜಿ ಅವರ ಪೀಠ ತ್ಯಾಗದ ವಿಚಾರ ಅವರಿಗೆ ಬಿಟ್ಟಿದ್ದು. ಪ್ರಕರಣ ತನಿಖೆ ಹಂತದಲ್ಲಿದೆ ಹಾಗಾಗಿ ಅದರ ಬಗ್ಗೆ ಹೆಚ್ಚು ಯಾರೂ ಮಾತನಾಡಬಾರದು ಎಂದರು.
ಇನ್ನು, ಸತ್ಯಾಸತ್ಯತೆ ತಿಳಿಯಲು, ಕಾನೂನು ಪ್ರಕ್ರಿಯೆ ಮುಗಿಯಬೇಕು. ಬೇರೆ ತೀರ್ಮಾನಗಳ ಬಗ್ಗೆ ಲಿಂಗಾಯತ ಸಮಾಜದ ಅನೇಕ ಧುರೀಣರು ತೀರ್ಮಾನ ಕೈಗೊಳ್ತಾರೆ. ನಾವು ಮುರುಘಾಶ್ರೀಗಳ ಶಿಷ್ಯರು ಆಗಿರೋದ್ರಿಂದ ಬಹುದೊಡ್ಡ ತೀರ್ಮಾನದ ಬಗ್ಗೆ ಮಾತನಾಡಲು ಆಗಲ್ಲ. ಇದೊಂದು ಬಹುದೊಡ್ಡ ಇತಿಹಾಸ ಇರುವ ಪರಂಪರೆಯ ಮಠ. ರಾಜಕಾರಣಿಗಳು ಮಾತನಾಡಿದಂತೆ ನಾವು ಮಾತನಾಡಲು ಕಷ್ಟ. ಶ್ರಿ ಮಠ ಹಾಗೂ ಪರಂಪರೆ ಉಳಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಅದಲ್ಲದೇ, ನಾವು ಕೂಡ ಮಠದಲ್ಲಿಯೇ ಬೆಳದಿರೋ ಕಾರಣ ನಾವು ಮಠದ ಜೊತೆಗೆ ಇದ್ದೀವಿ. ಶ್ರೀಗಳು ನಿನ್ನೆ ಅಜ್ಞಾತಸ್ಥಳಕ್ಕೆ ತೆರಳಿದ ವಿಚಾರ. ಅದರ ಬಗ್ಗೆ ಮಾಹಿತಿ ಇಲ್ಲ, ನಾವು ಸಣ್ಣೋರ. ೧೫ ವರ್ಷದಿಂದ ಶ್ರೀಗಳ ಮೇಲೆ ಷಡ್ಯಂತ್ರ ಇದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ಶ್ರೀಗಳ ನಮ್ಮ ಬಳಿ ಎಂದೂ ಬಹಿರಂಗವಾಗಿ ಹೇಳಿಕೊಂಡಿಲ್ಲ. ಕಾನೂನು ಪ್ರಕ್ರಿಯೆ ಇದೆ, ಇದರ ಬಗ್ಗೆ ನಾವು ತೀರ್ಪು ಕೊಡೋದು ಸರಿಯಲ್ಲ ಎಂದರು.